ಕೇರಳ ರಾಜ್ಯದ ವಯನಾಡು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಭೂ ಕುಸಿತ ಸಂಭವಿಸಿ, ಅನೇಕ ಸಾವು-ನೋವು, ಆಸ್ತಿ-ಪಾಸ್ತಿಗೆ ಹಾನಿ ಉಂಟಾಗಿದೆ.
ಈ ಹಿನ್ನೆಲೆ ಇಂದು ವಯನಾಡಿಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗುಡ್ಡ ಕುಸಿತ ಸಂಭವಿಸಿದ ಮುಂಡುಕೈ ಹಾಗೂ ಅಕ್ಕಪಕ್ಕದ ನಾಲ್ಕು ಹಳ್ಳಿಗಳಲ್ಲಿ ಸುತ್ತಾಡಿದ ಅವರು ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನನ್ನ ತಂದೆ ಮೃತಪಟ್ಟಾಗ ನನಗೆ ಆದ ನೋವು ಇದೀಗ ಮತ್ತೆ ಎದುರಾಗಿದೆ” ಎಂದು ಭಾವುಕರಾದರು.
ಇಲ್ಲಿನ ಜನರು ಕೇವಲ ಒಬ್ಬ ತಂದೆಯನ್ನು ಮಾತ್ರವಲ್ಲ, ಇಡೀ ಕುಟುಂಬವನ್ನೇ ಕಳೆದುಕೊಂಡಿದ್ದಾರೆ. ತಾವು ಗೌರವಿಸುವ ಹಾಗೂ ಪ್ರೀತಿ ಪಾತ್ರರಾಗಿದ್ದ ಜನರನ್ನೇ ಇಲ್ಲಿನವರು ಕಳೆದುಕೊಂಡಿದ್ಧಾರೆ. ಇದೀಗ ಇಡೀ ದೇಶದ ಗಮನ ವಯನಾಡಿನತ್ತ ಇದೆ ಎಂದು ಹೇಳಿದರು.
ಇಲ್ಲಿನ ಪರಿಸ್ಥಿತಿ ನೋಡಲು ನಾವು ಬಂದಿದ್ದೇವೆ. ಇಲ್ಲಿನ ಜನರ ಸಂಕಷ್ಟದ ಸನ್ನಿವೇಶ ನೋಡಿ ಬಹಳ ನೋವಾಗುತ್ತಿದೆ. ತಮ್ಮ ಮನೆ ಹಾಗೂ ಕುಟುಂಬ ಸದಸ್ಯರನ್ನೇ ಕಳೆದುಕೊಂಡು ಜನ ಸಂಕಷ್ಟದಲ್ಲಿದ್ದಾರೆ. ಇವರಿಗೆ ಸೂಕ್ತ ಪರಿಹಾರ ಸಿಗುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.
ದುರಂತವು ಅಗಾಧವಾಗಿದೆ ಮತ್ತು ವಯನಾಡನ್ನು ಗುಣಪಡಿಸಲು ಅಗತ್ಯವಾದ ಕೆಲಸವು ನಡೆಯಬೇಕಾಗಿದೆ. ಈಗ ರಾಜಕೀಯದ ಸಮಯವಲ್ಲ. ಈ ಸಂಕಷ್ಟದ ಸಮಯದಲ್ಲಿ ಇಡೀ ದೇಶವೇ ವಯನಾಡಿನೊಂದಿಗೆ ನಿಂತಿದೆ. ಜನರನ್ನು ಬೆಂಬಲಿಸಲು ಅಗತ್ಯವಿರುವ ಎಲ್ಲಾ ನೆರವು ನೀಡಲು ನಾವು ಒಗ್ಗೂಡಬೇಕು ಮತ್ತು ಒಟ್ಟಾಗಿ ಕೆಲಸ ಮಾಡಬೇಕು ಎಂದರು.
ನಂತರ ಘಟನಾ ಸ್ಥಳದಲ್ಲಿ ಹಗಲು – ರಾತ್ರಿ ಎನ್ನದೆ ದಿನವಿಡೀ ಶ್ರಮಿಸುತ್ತಿರುವ ವೈದ್ಯರು, ನರ್ಸ್‌ಗಳು, ಜಿಲ್ಲಾಡಳಿತ, ಸ್ವಯಂ ಸೇವಕರು ಹಾಗೂ ಎನ್‌ಡಿಆರ್‌ಎಫ್ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದರು.
ಈ ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಉಪಸ್ಥಿತರಿದ್ದರು.