
ತಾಲೂಕಿನಲ್ಲಿ ಚಿರತೆಗಳ ದಾಳಿಗೆ ಒಂದಿಲ್ಲೊಂದು ಮೂಕ ಪ್ರಾಣಿಗಳು ಬಲಿ ಆಗುತ್ತಲೇ ಇವೆ. ಆ ಊರಲ್ಲಿ ಚಿರತೆ ದಾಳಿಗೆ ಮೇಕೆ ಬಲಿ, ಈ ಊರಲ್ಲಿ ಹಸುವನ್ನು ಬಲಿ ಪಡೆದ ಚಿರತೆ ಎಂದು ಮಾಧ್ಯಮಗಳು ವರದಿ ಮಾಡುತ್ತಲೇ ಇವೆ. ಆದರೆ, ಅರಣ್ಯ ಇಲಾಖಾಧಿಕಾರಿಗಳು ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ಕಾಲಕಾಲಕ್ಕೆ ಸಂಬಳ ಎಣಿಸಿಕೊಂಡು ಬೇಜವಾಬ್ದಾರಿ ಮೆರೆಯುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಅರಣ್ಯ ಇಲಾಖೆ ಬೇಜವಾಬ್ದಾರಿ ಜೊತೆಗೆ ಅರಣ್ಯ ನಾಶದಿಂದ ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಿವೆ. ಇವುಗಳ ಕಾರಣದಿಂದ ಮೂಕ ಪ್ರಾಣಿಗಳು ಬಲಿಯಾಗುತ್ತಿವೆ. ಆದರೆ, ಇದಕ್ಕೆ ಸರ್ಕಾರ ಮಾತ್ರ ಯಾವ ಕ್ರಮ ಕೈಗೊಳ್ಳದೇ ಕೈಕಟ್ಟಿ ಕುಳಿತಿದೆ.

ಜು.24ರಂದು ಚಿರತೆ ದಾಳಿಗೆ ಮೇಕೆ ಬಲಿಯಾಗಿರುವ ಘಟನೆ ತಾಲೂಕಿನ ಗುಂಡಪ್ಪನಾಯಕನಹಳ್ಳಿಯಲ್ಲಿ ನಡೆದಿತ್ತು.

ಈ ಘಟನೆ ಮಾಸುವ ಮುನ್ನವೇ ಜು.27 ರಂದು ತಾಲೂಕಿನ ಹುಲುಕುಡಿ ಬೆಟ್ಟದ ತಪ್ಪಲಿನಲ್ಲಿರುವ ಮಾಡೇಶ್ವರ ಗ್ರಾಮದಲ್ಲಿ ಚಿರತೆ ದಾಳಿಗೆ ಹಸುವೊಂದು ಬಲಿಯಾಗಿರುವ ಘಟನೆ ನಡೆದಿದೆ.
ತಾಲೂಕಿನ ಜನ ಹೆಚ್ಚಾಗಿ ಕೃಷಿ ಹಾಗೂ ಹೈನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಇದೀಗ ಕಾಡು ಪ್ರಾಣಿಗಳ ಉಪಟಳದಿಂದ ಕೃಷಿ ಹಾಗೂ ಹೈನುಗಾರಿಕೆ ಮಾಡಲು ರೈತರಿಗೆ ತೀವ್ರ ತೊಂದರೆ ಉಂಟಾಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಾಣಿಗಳನ್ನು ಕಳೆದುಕೊಂಡ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಆದರೆ, ಸರ್ಕಾರದಿಂದ ಯಾವ ಪರಿಹಾರವೂ ರೈತರಿಗೆ ಸಿಗುತ್ತಿಲ್ಲ. ನಮಗೆ ಯಾವ ಪರಿಹಾರನೂ ಬೇಡ, ಅರಣ್ಯ ಇಲಾಖೆಯು ಚಿರತೆ ಹಿಡಿಯಲು ಬೋನ್ಗಳನ್ನು ಅಳವಡಿಸುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಂಡು ಯಾವ ಹಾನಿ ನಡೆಯದಂತೆ ನೋಡಿಕೊಂಡರೆ ಸಾಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇನ್ನಾದರೂ ನಾಡಿನಂಚಿನಲ್ಲಿರುವ ಚಿರತೆಗಳನ್ನು ಸಂಬಂಧಪಟ್ಟ ಇಲಾಖೆ ಸೆರೆ ಹಿಡಿಯುತ್ತದೆಯೇ..? ಅದೇರೀತಿ ಅರಣ್ಯ ನಾಶವಾಗದಂತೆ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳುತ್ತದಯೇ ಎಂದು ಕಾದು ನೋಡಬೇಕಾಗಿದೆ.