
ಶಾಲಾ, ಕಾಲೇಜಿನಲ್ಲಿ ಓದುತ್ತಿರುವ (18 ವರ್ಷದೊಳಗಿನವರು) ಬಾಲಕ, ಬಾಲಕಿಯರಿಗೆ ಚಾಲನ ಪರವಾನಗಿ ಅಲ್ಲ, ಬೈಕ್ ಕೂಡಾ ಕೈಗೆ ನೀಡಬಾರದೆಂಬುದು ಸುಪ್ರಿಂ ಕೋರ್ಟ್ ಆದೇಶ ಇದೆ. ಈ ಆದೇಶ ಪಾಲಿಸದಿದ್ದಲ್ಲಿ ಪೋಷಕರಿಗೆ ದಂಡ ಅಥವಾ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ನಗರ ಠಾಣಾ ಇನ್ಸ್ ಪೆಕ್ಟರ್ ಅಮರೇಶ್ ಗೌಡ ಎಚ್ಚರಿಸಿದರು.
ನಗರದಲ್ಲಿ ಅಪ್ರಾಪ್ತರ ಬೈಕ್ ಸಂಚಾರಕ್ಕೆ ಕಡಿವಾಣ ಹಾಕಲು, 18 ವರ್ಷದೊಳಗಿನ ಮಕ್ಕಳು ಚಾಲಯಿಸುತ್ತಿದ್ದ ಬೈಕ್ ಗಳನ್ನು ತಡೆದು ಸಂಚಾರಿ ನಿಯಮಗಳನ್ನು ತಿಳಿಹೇಳುವ ಅಭಿಯಾನ ಕೈಗೊಂಡು ಮಾತನಾಡಿದ ಅವರು, ಅಪ್ರಾಪ್ತ ಬಾಲಕ, ಬಾಲಕಿಯರ ಕೈಗೆ ಬೈಕ್ ಸಿಕ್ಕರೆ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಮನಸೋಇಚ್ಛೆ ಬೈಕ್ ಚಾಲಯಿಸಿ ಸಾರ್ವಜನಿಕ ಸಂಚಾರ ಅಸ್ತವ್ಯವಸ್ಥಗೊಳಿಸಿದ್ದಾರೆ. ಹೀಗಾಗಿ ಈ ವರ್ಗದ ಮಕ್ಕಳು ನಗರ ಸೇರಿದಂತೆ ಜಿಲ್ಲಾದ್ಯಂತ ಎರ್ರಾಬಿರ್ರಿ ಬೈಕ್ನಲ್ಲಿ ಸಂಚರಿಸುವ ಮೂಲಕ ರಸ್ತೆ ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ. ಅದೆಷ್ಟೋ ಮಕ್ಕಳು ಅರಳುವ ಮುನ್ನವೇ ಇಹಲೋಕ ತ್ಯಜಿಸುತ್ತಿರುವುದು ಪ್ರಜ್ಞಾವಂತರ ಆತಂಕಕ್ಕೆ ಕಾರಣವಾಗಿದೆ ಎಂದರು.
18 ವರ್ಷ ಪೂರೈಸದ ಬಾಲಕ, ಬಾಲಕಿ ಕೈಗೆ ಬೈಕ್ ಕೊಡುವುದನ್ನು ಪಾಲಕರು ಮೊದಲು ನಿರಾಕರಿಸಬೇಕು. ಬೈಕ್ ಕೊಟ್ಟರೆ ಸಿನಿಮಾ ಸ್ಟ್ರೈಲ್ನಲ್ಲಿ ಬೈಕ್ ಓಡಿಸುವ ಮೂಲಕ ಅಪಘಾತ ಸೇರಿದಂತೆ ಇಲ್ಲದ ಆವಾಂತರಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ. ಪೋಷಕರಿಗಿರುವ ಮರ್ಯಾದೆಯನ್ನು ರಸ್ತೆ ಪಾಲು ಮಾಡುತ್ತಾರೆ. ಅವರು ಮಾಡುವ ಅನಾಹುತಕ್ಕೆ ಪೋಷಕರೇ ಬೆಲೆ ತೆತ್ತಬೇಕಾಗುತ್ತದೆ ಎನ್ನುವದನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಎಲ್ಲರ ಜೀವ ಅತ್ಯಮೂಲ್ಯ, ಆದ್ದರಿಂದ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಬೈಕ್ ಸವಾರರು ತಲೆಗೆ ಹೆಲ್ಮೆಟ್ ಧರಿಸಬೇಕು ಎಂದು ತಿಳಿಹೇಳಿದರು.
ಅಪ್ರಾಪ್ತರು ತಂದಿದ್ದ ಬೈಕ್ ಗಳನ್ನು ಸೀಜ್ ಮಾಡಿ ಪೋಷಕರನ್ನು ಠಾಣೆಗೆ ಬರಮಾಡಿಕೊಂಡು ಇನ್ನು ಮುಂದೆ 18 ವರ್ಷ ಪೂರೈಸದ ಬಾಲಕ, ಬಾಲಕಿ ಕೈಗೆ ಬೈಕ್ ಕೊಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.