ಅಂಗನವಾಡಿ ಜಾಗವನ್ನೇ ಗುಳುಂ ಮಾಡಲು ಪಿಡಿಒ ಯತ್ನ ಆರೋಪ: ಸರ್ಕಾರಿ ಜಾಗ ಉಳಿಸಲು ಜಿಟಿಜಿಟಿ ಮಳೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯನಿಂದ ಅಹೋರಾತ್ರಿ ಧರಣಿ: ಆರೋಪ ಕುರಿತ ತನಿಖೆ ನಡೆಸಲಾಗುವುದು: ಧರಣಿ ಕೈಬಿಡುವಂತೆ ಜಿ.ಪಂ ಸಿಇಒ ಮನವಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದಲ್ಲಿ ಬರುವ ಅತಿ ಶ್ರೀಮಂತ ಗ್ರಾಮ ಪಂಚಾಯ್ತಿ. ಆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇದೀಗ ಸರ್ಕಾರಿ ಅಂಗನವಾಡಿ ಜಾಗವನ್ನೇ ಗುಳುಂ ಮಾಡಲು ಪಿಡಿಒ ಪ್ರಯತ್ನ ಮಾಡಿದ್ದಾರೆ ಎಂದು ಅದೇ ಪಂಚಾಯ್ತಿ ಸದಸ್ಯರೊಬ್ಬರು ಆರೋಪ ಮಾಡಿ ಅಹೋರಾತ್ರಿ ಧರಣಿಗರ ಕುಳಿತಿದ್ದಾರೆ. ಪಿಡಿಓ ಅಮಾನತಿಗೆ ಆಗ್ರಹಿಸಿ ಬೀರಸಂದ್ರ ಜಿಲ್ಲಾಡಳಿತ ಭವನದ ಮುಂದೆ ಅಹೋರಾತ್ರಿ ಧರಣಿಯನ್ನ ಪಂಚಾಯ್ತಿ ಸದಸ್ಯ ನಡೆಸುತ್ತಿದ್ದಾರೆ.

ಜಿಲ್ಲಾಡಳಿತ ಕಚೇರಿ ಮುಂದೆ ಜಿಟಿಜಿಟಿ ಮಳೆಯನ್ನು ಲೆಕ್ಕಿಸದೆ ಪಂಚಾಯ್ತಿ ಸದಸ್ಯನ ಧರಣಿ ನಡೆಸುತ್ತಿದ್ದಾನೆ. ಪಂಚಾಯ್ತಿ ಸದಸ್ಯನ ಬೆಂಬಲಕ್ಕೆ ನಿಂತು ಪಿಡಿಒ ಅಮಾನತಿಗೆ ಆಗ್ರಹಿಸುತ್ತಿರೋ ಗ್ರಾಮಸ್ಥರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲ ಗ್ರಾಮ ಪಂಚಾಯ್ತಿಯಲ್ಲಿ ನಕಲಿ ಹಕ್ಕುಪತ್ರ ಸೃಷ್ಟಿ ಮಾಡಿ ಪಂಚಾಯ್ತಿ ಪಿಡಿಒ ಅಂಗನವಾಡಿ ಜಾಗವನ್ನ ಖಾಸಗಿ ವ್ಯಕ್ತಿಗಳಿಗೆ ಇ-ಖಾತಾ ಮಾಡಿಕೊಟ್ಟಿರುವ ಆರೋಪ ಕೇಳಿ ಬಂದಿದೆ. ಅಂದಹಾಗೆ ಪೂಜನಹಳ್ಳಿ ಗ್ರಾಮದಲ್ಲಿರುವ ಅಂಗನವಾಡಿ ಜಾಗವನ್ನ ಕನ್ನಮಂಗಲ ಗ್ರಾಮ ಪಂಚಾಯತಿ ಪಿಡಿಒ ಶ್ರೀನಿವಾಸ್ ನಕಲಿ ಹಕ್ಕುಪತ್ರದ ಅಡಿಯಲ್ಲಿ ಬೇರೆಯವರಿಗೆ ಇ-ಖಾತೆ ಮಾಡಿಕೊಡಲಾಗಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ಸೋಮಶೇಖರ್ ಆರೋಪಿಸಿದ್ದಾರೆ.

ಅಂಗನವಾಡಿ ಜಾಗವನ್ನ ಗುಳುಂ ಮಾಡಲು ಹೊರಟಿದ್ದ ಪಿಡಿಒರನ್ನ ಅಮಾನತಿಗೆ ಆಗ್ರಹಿಸಿ ಜಿಲ್ಲಾಡಳಿತ ಭವನದ ಮುಂದೆ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ಅಂದಹಾಗೆ ಸರ್ಕಾರಿ ಅಂಗನವಾಡಿ ಮತ್ತು ಸರ್ಕಾರಿ ರಸ್ತೆ ಜೊತೆ ಜೊತೆಗೆ ಅಂಗನವಾಡಿ ಪಕ್ಕದಲ್ಲಿರುವ ಡೈರಿ ಕಟ್ಟಡ ಮತ್ತು ಒಂದು ಗೋಡೌನ್ ಸೇರಿ ಒಟ್ಟು ಒಂಭತ್ತು ಸಾವಿರ ಅಡಿಗಳಷ್ಟು ಜಾಗವನ್ನು ನಕಲಿ ಹಕ್ಕು ಪತ್ರದ ಆಧಾರದ ಮೇಲೆ ಇ-ಸ್ವತ್ತು ಮಾಡಲಾಗಿದೆಯಂತೆ. ಕೋಟ್ಯಾಂತರ ಮೌಲ್ಯದ ಜಾಗವನ್ನ ಪಿಡಿಒ ಖಾಸಗಿ ವ್ಯಕ್ತಿಗಳಿಗೆ ಮಾಡಿಕೊಟ್ಟು ಮತ್ತೆ ಖಾಸಗಿ ವ್ಯಕ್ತಿಗಳಿಂದ ದಾನಪತ್ರವಾಗಿ ಮತ್ತದೆ ಪಂಚಾಯ್ತಿಗೆ ಬರಿಸಿಕೊಳ್ಳುವ ಮೂಲಕ ಅದರಲ್ಲೂ ಗೋಲ್ ಮಾಲ್ ಮಾಡಿದ್ದು, ಅಕ್ರಮ ನಡೆಸಲು ಕಾರಣವಾದ ಪಿಡಿಒ ಶ್ರೀನಿವಾಸ್.ಟಿ ಸೇರಿದಂತೆ ಇತರೆ ಅಧಿಕಾರಿಗಳನ್ನು ಅಮಾನತ್ತು ಮಾಡಿ ವಿಶೇಷ ತಂಡ ರಚನೆ ಮಾಡಿ ತನಿಖೆ ನಡೆಸಬೇಕೆಂದು ಅಹೋರಾತ್ರಿ ಧರಣಿ ಮುಂದುವರಿಸಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನುರಾಧ ಅವರು ಭೇಟಿ ನೀಡಿ, ಧರಣಿ ನಿರತ ಗ್ರಾ.ಪಂ ಸದಸ್ಯನ ಅಹವಾಲನ್ನು ಸ್ವೀಕರಿಸಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ನನಗೆ ದೂರು ಬಂದಿದೆ. ಅವರು ಮಾಡುತ್ತಿರುವ ಪ್ರತಿಭಟನೆ ನ್ಯಾಯುತವಾಗಿದಿಯೇ ಅಥವಾ ಇಲ್ಲವೋ ಎಂಬುದು ತನಿಖೆಯ ನಂತರ ತಿಳಿಯುತ್ತದೆ. ತನಿಖೆ ನಂತರ ಪಿಡಿಒ ಮತ್ತು ದೂರುದಾರರಿಗೆ ಇಬ್ಬರಿಗೂ ನೋಟಿಸ್ ನೀಡಲಾಗುತ್ತದೆ. ತನಿಖಾಧಿಕಾರಿ ಏನು ವರದಿ ನೀಡುತ್ತಾರೋ ಅದರ ಮೇಲೆ ತೀರ್ಮಾನ ತೆಗೆದುಕೊಳ್ಳುತ್ತದೆ. ಅವರ ಮುಖ್ಯ ಬೇಡಿಕೆ ಪಿಡಿಒ ವರ್ಗಾವಣೆ ಅಥವಾ ಅಮಾನತು ಮಾಡಬೇಕೆಂದು. ಇದು ನನ್ನ ವ್ಯಾಪ್ತಿಯಲ್ಲಿ ಇಲ್ಲ, ಈ ಕುರಿತು ಆಯುಕ್ತಾಲಯಕ್ಕೆ ವರದಿ ನೀಡುತ್ತೇನೆ. ಅಲ್ಲಿಂದ ಏನು ನಿರ್ದೇಶನ ಬರುತ್ತದೆ ಅದರ ಮೇಲೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಸರಕಾರದಿಂದ ಅವರ ಡೆಪಟೇಷನ್ ಆಗಿದೆ. ಹಾಗಾಗಿ ಅದನ್ನ ತೆಗೆದುಹಾಕಲು ನನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದಿದ್ದಾರೆ.

ಆದರೆ, ನನಗೆ ನ್ಯಾಯ ಸಿಗುವವರೆಗೆ ನಾನು ಪ್ರತಿಭಟನೆಯಿಂದ ಹಿಂದೆ ಸರಿಯೋದಿಲ್ಲ ಎಂದು ಪಂಚಾಯತಿ ಸದಸ್ಯ ಪಟ್ಟು ಹಿಡಿದಿದ್ದಾರೆ.

ಒಟ್ಟಾರೆ ಅಂಗನವಾಡಿ ಸರ್ಕಾರಿ ಜಾಗವನ್ನೆ ಖಾಸಗಿಯವರಿಗೆ ಪಿಡಿಒ ಇ ಸ್ವತ್ತು ಮಾಡಿಕೊಟ್ಟಿರುವ ಆರೋಪ ಕೇಳಿ ಬಂದಿದ್ದು, ಇದರ ವಿರುದ್ದ ಪಂಚಾಯ್ತಿ ಸದಸ್ಯ ದಾಖಲೆಗಳ ಮೂಲಕ ಜಿಲ್ಲಾಡಳಿತ ಕಚೇರಿ ಮುಂದೆ ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ. ಈ ಕೂಡಲೇ ಸಂಬಂಧಪಟ್ಟ ಜಿಲ್ಲಾಡಳಿತ ಈ ಬಗ್ಗೆ ತನಿಖೆಯನ್ನ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳತ್ತಾರೋ ಇಲ್ಲವೋ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!