ಕೋಲಾರ: ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ಸೋಮವಾರ ಹಾಲು ಉತ್ಪಾದಕರ ಸಹಕಾರ ಸಂಘ, ಕೃಷಿ ಇಲಾಖೆ, ಹಾಗೂ ತೋಟಗಾರಿಕೆ ಇಲಾಖೆಯ ವತಿಯಿಂದ ರೈತರಿಗೆ ಹಾಗೂ ಹಾಲು ಉತ್ಪಾದಕರಿಗೆ ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆ ಸೇರಿದಂತೆ ಸರಕಾರದಿಂದ ಸಿಗುವ ಸೌಲಭ್ಯಗಳು ಕುರಿತಂತೆ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು,
ಈ ಕಾರ್ಯಾಗಾರದಲ್ಲಿ ಕೃಷಿ ಇಲಾಖೆಯ ಅಭಿಯಂತರ ಎನ್ ಸುನಿಲ್ ಮಾಹಿತಿ ನೀಡಿ ಮಾತನಾಡಿದ ಅವರು, ಸರಕಾರದ ವಿವಿಧ ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ರೈತರಿಗೆ ಅರಿವು ಮೂಡಿಸಿ ಅದರ ಸದುಪಯೋಗವನ್ನು ಗ್ರಾಮದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದೇವೆ. ರೈತರಿಗೆ ಹಲವು ರೀತಿಯ ಸೌಲಭ್ಯಗಳು ಇದ್ದರೂ ಈ ಬಗ್ಗೆ ರೈತರಲ್ಲಿ ಮಾಹಿತಿಯ ಕೊರತೆಯಿಂದ ರೈತರಿಗೆ ಸರಿಯಾಗಿ ತಲುಪುತ್ತಿಲ್ಲ. ಮಾಹಿತಿ ಪಡೆದ ಪ್ರತಿಯೊಬ್ಬರೂ ಬೇರೆಯವರಿಗೆ ಮಾಹಿತಿ ನೀಡಿ ಅವರು ಕೂಡ ಸೌಲಭ್ಯಗಳ ಸದುಪಯೋಗಪಡಿಸಿಕೊಳ್ಳುವಂತೆ ಮಾಡಬೇಕಾಗಿದೆ ಎಂದರು.
ರೈತರು ತಮ್ಮ ಸ್ವಂತ ಜಮೀನುಗಳಲ್ಲಿ ಮಳೆ ನೀರು ವ್ಯರ್ಥವಾಗದಂತೆ ಹೊಂಡದಲ್ಲಿ ಸಂಗ್ರಹಿಸಿ ಅದನ್ನು ಕೃಷಿಗೆ ಬಳಸಬಹುದಾಗಿದೆ. ಜೊತೆಗೆ ಬದು ನಿರ್ಮಿಸಿಕೊಂಡು ಮಳೆ ನೀರು ಹಾಗೂ ಮಣ್ಣು ಹೊರಗಡೆ ಹೋಗದಂತೆ ತಡೆಯಬಹುದಾಗಿದೆ. ಕೃಷಿ ಹಾಗೂ ಹೈನುಗಾರಿಕಾ ಚಟುವಟಿಕೆಗಳಿಗೆ ಯಂತ್ರೋಪಕರಣಗಳನ್ನು ನೀಡಲಿದ್ದು, ಇದರ ಸದುಪಯೋಗವನ್ನು ಪಡಿಸಿಕೊಳ್ಳಿ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಚಿಕ್ಕನಹಳ್ಳಿ ಡೇರಿ ಅಧ್ಯಕ್ಷ ಸಿ.ಅಮರೇಶ್, ಕಾರ್ಯದರ್ಶಿ ಆರ್ ಗೋಪಾಲಪ್ಪ, ಸಹಾಯಕ ಆರ್ ಬೈಚೇಗೌಡ, ಅಧಿಕಾರಿಗಳಾದ ನಾರಾಯಣಸ್ವಾಮಿ, ರಮೇಶ್, ಚಂದ್ರಶೇಖರ್, ನವನೀತ, ಚಂದ್ರಮೋಹನ್ ಸೇರಿದಂತೆ ಗ್ರಾಮಸ್ಥರು, ರೈತರು, ಹಾಲು ಉತ್ಪಾದಕರು ಇದ್ದರು.