ಕೋಲಾರ : ಸ್ವಾತಂತ್ರ್ಯವಾಗಿ ಬದುಕುವ ದಾರಿಯನ್ನ, ಹೆಣ್ಣು ಮಕ್ಕಳಿಗೆ ಸಂಸ್ಕೃತಿ ಮತ್ತು ಸಂಸ್ಕಾರವನ್ನ ಸರ್ಕಾರಿ ಶಾಲೆಗಳು ಕಲಿಸುತ್ತವೆ ಎಂದು ಶಿಕ್ಷಕ ಇಂದ್ರ ಕುಮಾರ್ ಹೇಳಿದರು.
ನಗರದ ಸರ್ಕಾರಿ ಪ್ರೌಢಶಾಲೆ ಅಣ್ಣಿಹಳ್ಳಿಯಲ್ಲಿ 2006-07ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳು ಎಲ್ಲರಿಗೂ ಉಚಿತವಾಗಿ ಶಿಕ್ಷಣ ನೀಡುವುದರಿಂದ ಬಡ ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಲು ಸಹಕಾರಿಯಾಗಲಿದೆ. ನನಗೆ ಕೆಲಸ ಸಿಕ್ಕಾಗಲು ಇಷ್ಟೊಂದು ಖುಷಿಯಾಗಲಿಲ್ಲ, ಈ ದಿನ ಅದಕ್ಕೆಲ್ಲ ಮೀರಿದ ಖುಷಿ ಸಿಕ್ಕಿದೆ ಎಂದು ಹರ್ಷವನ್ನು ವ್ಯಕ್ತಪಡಿಸಿದ್ದರು.
ಶಾಲೆಯ ಅಂದಿನ ಮುಖ್ಯ ಶಿಕ್ಷಕರಾದ ನರಸಿಂಹಯ್ಯ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಜಯವನ್ನು ಸಾಧಿಸಲು ಶಿಸ್ತು ಮುಖ್ಯ. ಓದಿರುವೆ ಎಂಬುದು ಮುಖ್ಯ ಅಲ್ಲ, ಸತ್ಪ್ರಜೆಗಳಾಗಿ ಬದುಕುವುದು ಮುಖ್ಯ. ಸುಮಾರು 17 ವರ್ಷಗಳ ಹಿಂದೆ ಓದಿದ ನೀವುಗಳು ಎಲ್ಲಾ ಗುರುಗಳನ್ನು ಸ್ಮರಿಸಿ, ಈಗಲೂ ಒಗ್ಗಟ್ಟಿನಿಂದ, ಕೆಲ ವಿದ್ಯಾರ್ಥಿಗಳು ವಿವಾಹ ವಾಗಿದ್ದರೂ ಸಹ ಸ್ನೇಹಿತರೊಂದಿಗೆ ಸೇರಿರುವುದು, ಒಂದೇ ಸರದಿಂದ ಕಳಚಿ ಹೋದ ಮಣಿಗಳನ್ನು ಮತ್ತೆ ಹುಡುಕಾಡಿ ಪೋಣಿಸುವ ಕಾರ್ಯಕ್ಕೆ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಅಂದು ಧರಿಸಿದ ಶಾಲಾ ಸಮವಸ್ತ್ರವನ್ನ ಇಂದಿಗೂ ಇಟ್ಟಿದ್ದು ಕಾರ್ಯಕ್ರಮದಲ್ಲಿ ಪ್ರದರ್ಶಿಸಿ ವಿದ್ಯಾರ್ಥಿ ಶಾನುಭೋಗನಹಳ್ಳಿಯ ರವೀಂದ್ರ ಮಾತನಾಡಿ, ಗಿಡವಾಗಿದ್ದ ನಮ್ಮನ್ನ ಪೋಷಣೆ ನೀಡಿ ಉತ್ತಮ ಮಟ್ಟದಲ್ಲಿ ಮರವಾಗಿ ನಿಲ್ಲಲು ಕಾರಣವಾದವರು ನಮ್ಮ ಗುರುಗಳು. ಅದಕ್ಕಾಗಿ ಪ್ರತಿಯೊಬ್ಬರೂ ಅಂದಿಗೂ ಎಂದಿಗೂ ಗುರುಗಳನ್ನು ನೆನಯಲೇ ಬೇಕು. ಒಂದು ಅಕ್ಷರ ಕಲಿಸಿದವರು ಸಹ ಗುರುಗಳೇ, ನಾವು ಎಷ್ಟು ಎತ್ತರಕ್ಕೆ ಬೆಳೆದರೂ, ಬೆಳೆದು ಬಂದ ದಾರಿಯನ್ನ ಮರೆಯಬಾರದು ಆದ್ದರಿಂದ ಶಾಲೆಯ ಅಭಿವೃದ್ಧಿಯಲ್ಲಿ ಕೈಜೋಡಿಸಿ, ಶಾಲೆಗೆ ದ್ವನಿವರ್ಧಕವನ್ನು ನೀಡುವುದಾಗಿ ಭರವಸೆ ನೀಡಿದರು.
ಎಲ್ಲಾ ಗುರುವೃಂದದವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು, ವಿದ್ಯಾರ್ಥಿಗಳ ನೀಡಿದ ಕಿರುಕಾಣಿಕೆ ಸ್ವೀಕರಿಸಿ, ಗುರು ಶಿಷ್ಯರ ಬಾಂಧವ್ಯ ಶಾಶ್ವತ ಎಂಬುದು ಸಾಬೀತುಪಡಿಸಲಾಯಿತು.
ಕಾರ್ಯಕ್ರಮದಲ್ಲಿ 2006-07ನೇ ಸಾಲಿನಲ್ಲಿ ಕಾರ್ಯನಿರ್ವಹಿಸಿದ ವಿಜ್ಞಾನ ಶಿಕ್ಷಕರಾದ ಅಪ್ರೋಚ್ ಸುಲ್ತಾನ್ ಮೇಡಂ(AS), ಗಣಿತ ಶಿಕ್ಷಕರಾದ ಸುಜಾತ, ಸಮಾಜ ವಿಜ್ಞಾನ ಶಿಕ್ಷಕರಾದ ಅನ್ನಪೂರ್ಣ, ಕನ್ನಡ ಶಿಕ್ಷಕರಾದ ಬಿ.ಎಂ.ಪುಷ್ಪಲತಾ, ಹಿಂದಿ ಭಾಷಾ ಶಿಕ್ಷಕರಾದ, ಕೆ.ವೆಂಕಟೇಶ್, ದೈಹಿಕ ಶಿಕ್ಷಣ ಶಿಕ್ಷಕರಾದ ಅನಿತಾ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.