ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಕನಸವಾಡಿ ಶ್ರೀ ಶನಿಮಹಾತ್ಮ ದೇವಸ್ಥಾನಕ್ಕೆ ಮಾಂಸದ ತುಂಡುಗಳನ್ನು ಒಳಗೊಂಡ ಹೂವಿನ ಹಾರ ತಂದಿದ್ದ ಆರೋಪಿಗಳನ್ನು ಶನಿವಾರ ದೇವಾಲಯದ ಸಿಬ್ಬಂದಿ ಪತ್ತೆಹಚ್ಚಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿಗಳು ಹೊಸಕೋಟೆ ತಾಲ್ಲೂಕಿನ ಕಂಬಲಹಳ್ಳಿ ರಾಜು ಹಾಗೂ ವೈಟ್ ಫೀಲ್ಡ್ ಮೂಲದ ಆಟೋಚಾಲಕ ಸೋಮಶೇಖರ್ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ಆರೋಪಿಗಳು ಒಂದು ತಿಂಗಳ ಹಿಂದೆಯು ಸಹ ಮಧ್ಯಾಹ್ನದ ಸಮಯದಲ್ಲಿ ದೇವಾಲಯಕ್ಕೆ ಬಂದು ಹೂವಿನ ಹಾರಗಳೊಂದಿಗೆ ಮಾಸಂದ ತುಂಡುಗಳನ್ನು ಪೋಣಿಸಿ ಸಿದ್ಧಪಡಿಸಲಾಗಿದ್ದ ಹಾರವನ್ನು ತಂದಿದ್ದರು.
ಮಧ್ಯಾಹ್ನದ ಸಮಯವಾಗಿದ್ದರಿಂದ ದೇವಾಲಯದ ಸಿಬ್ಬಂದಿ ಹೂವಿನ ಹಾರದ ಪ್ಲಾಸ್ಟಿಕ್ ಕವರ್ ನ್ನು ಬಾಗಿಲಿನಲ್ಲೇ ಪಡೆದು ಸಂಜೆಯ ಅಲಂಕಾರಕ್ಕೆ ಬಳಸಲಾಗುವುದು ಎಂದು ಹೇಳಿ ಕಳುಹಿಸಿದ್ದರು. ಸಂಜೆ ಹಾರಗಳನ್ನು ತೆಗೆದು ನೀರು ಹಾಕುವಾಗ ಮಾಂಸದ ತುಂಡುಗಳನ್ನು ಪೋಣಿಸಿದ್ದು ಬೆಳಕಿಗೆ ಬಂದಿತ್ತು.
ಆರೋಪಿಗಳು ದೇವಾಲಯಕ್ಕೆ ಬಂದು ಹೋಗಿದ್ದ ಎಲ್ಲಾ ದೃಶ್ಯಗಳನ್ನು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದದವು. ಈ ದೃಶ್ಯಗಳನ್ನು ಆದರಿಸಿ ದೊಡ್ಡಬೆಳವಂಗಲ ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದ್ದರು ಆರೋಪಿಗಳು ಪತ್ತೆಯಾಗಿರಲಿಲ್ಲ. ಶನಿವಾರ ಮತ್ತೆ ಇದೇ ಆರೋಪಿಗಳು ದೇವಾಲಯಕ್ಕೆ ಹಾರ ಕೊಡಲು ಬಂದಾಗ ಸಿಸಿ ಟಿವಿ ದೃಶ್ಯಗಳ ಮೇಲೆ ತೀವ್ರ ನಿಗಾವಹಿಸಿದ್ದ ದೇವಾಲಯದ ಸಿಬ್ಬಂದಿ ಆರೋಪಿಗಳನ್ನು ಗುರುತಿಸಿ ಹಾರ ಕೊಡುವ ಸಂದರ್ಭದಲ್ಲೇ ಬಂಧಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಧಾರ್ಮಿಕ ಸ್ಥಳ ಅಪವಿತ್ರಗೊಳಿಸಲು ಯತ್ನಿಸಿದ ಆರೋಪದ ಮೇಲೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ.