ದೊಡ್ಡಬಳ್ಳಾಪುರ:ಲಕ್ಷ ಲಕ್ಷ ಬೆಲೆ ಬಾಳುವ ಸರ್ಕಾರಿ ಜಾಗ ಕಬಳಿಕೆಗೆ ಮಂಜುನಾಥ್ ಮತ್ತ ಸುರೇಶ್ ಎನ್ನುವವರು ಪ್ಲ್ಯಾನ್ ಮಾಡಿ, ಆ ಜಾಗದಲ್ಲಿ ಪಿಟ್ ಗುಂಡಿ ನಿರ್ಮಿಸಿ ಕಾಂಪೌಂಡ್ ಹಾಕಲು ಯತ್ನಿಸಿರುವ ಘಟನೆ ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಳ್ಳುಪುರ ಗ್ರಾಮದಲ್ಲಿ ನಡೆದಿದೆ.
ಕೂಡಲೇ ಗ್ರಾಮಸ್ಥರು ಎಚ್ಚೆತ್ತುಕೊಂಡು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಗ್ರಾಮಾಂತರ ಠಾಣಾ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದಾರೆ.
ದೂರಿನ ಮೇರೆಗೆ ಸ್ಥಳಕ್ಕೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಿದ್ದಾರೆ.
ಈ ಜಾಗದಲ್ಲಿ ಸಾರ್ವಜನಿಕರ ಕುಡಿಯುವ ನೀರಿಗಾಗಿ ನಿರ್ಮಿಸಿದ್ದ ಪುರಾತನ ಬಾವಿ ಇದೆ. ಈ ಜಾಗವನ್ನು ಮಂಜುನಾಥ್ ಮತ್ತು ಸುರೇಶ್ ಎನ್ನುವವರು ಒತ್ತುವರಿ ಮಾಡಲು ಯತ್ನಿಸಿದ್ದಾರೆ. ಇದು ಸರ್ಕಾರಿ ಜಾಗ. ಇದನ್ನು ಒತ್ತುವರಿ ಮಾಡಕೂಡದು ಎಂದು ಅವರು ಮನೆಕಟ್ಟುವಾಗಲೇ ನಾವು ಎಚ್ಚರಿಕೆ ನೀಡಲಾಗಿತ್ತು. ಅದೇರೀತಿ ಈ ಜಾಗಕ್ಕೆ ಕಾಂಪೌಂಡ್ ನಿರ್ಮಿಸುವಂತೆ ಪಟ್ಟಣ ಪಂಚಾಯಿತಿಗೆ ಅರ್ಜಿ ಹಾಕಿದ್ದೇವು. ಆದರೂ ಲಕ್ಷಾಂತರ ಬೆಲೆ ಬಾಳುವ ಜಾಗವನ್ನು ಒತ್ತುವರಿ ಮಾಡಲು ಮಂಜುನಾಥ್ ಮತ್ತು ಸುರೇಶ್ ಎನ್ನುವವರು ಯತ್ನಿಸಿದ್ದಾರೆ ಎಂದು ಅದೇ ಗ್ರಾಮದ ಮಧುಚಂದ್ರ ಆರೋಪಿಸಿದ್ದಾರೆ.
ಒತ್ತುವರಿ ಮಾಡಬಾರದು ಎಂದು ಪಟ್ಟಣ ಪಂಚಾಯಿತಿ ವತಿಯಿಂದ ನೋಟಿಸ್ ಬಂದಿದ್ದರೂ ಅದನ್ನು ಲೆಕ್ಕಿಸದೆ ನಿನ್ನೆ ಭಾನುವಾರದಂದು ಪಿಟ್ ಗುಂಡಿ ನಿರ್ಮಾಣ ಮಾಡಿ ಕಾಂಪೌಂಡ್ ಹಾಕಲು ಯತ್ನಿಸಿದ್ದಾರೆ. ಈ ಸರ್ಕಾರಿ ಜಾಗವನ್ನು ಉಳಿಸಿ ಗ್ರಂಥಾಲಯ, ಕುಡಿಯುವ ನೀರಿನ ಘಟಕ ಇಲ್ಲಿ ನಿರ್ಮಿಸಿ ಸಾರ್ವಜನಿಕರ ಉಪಯೋಗಕ್ಕೆ ಬರುಬಂತೆ ಮಾಡಬೇಕು ಎಂದು ಮಹೇಶ್ ಒತ್ತಾಯಿಸಿದ್ದಾರೆ.
ನಾವೇನು ಒತ್ತುವರಿ ಮಾಡಿಲ್ಲ. ಇದು ನಮ್ಮ ತಾತ, ಅಪ್ಪನ ಜಾಗ. ನಮ್ಮ ತಾತ ಆ ಕಾಲದಲ್ಲಿ ಸಾರ್ವಜನಿಕರ ನುಡಿ ನೀರಿಗಾಗಿ ಬಾವಿ ನಿರ್ಮಿಸಲು ಜಾಗವನ್ನು ದಾನ ಮಾಡಿದ್ದರು. ಈಗ ಈ ಬಾವಿ ಪಾಳು ಬಿದ್ದಿದೆ. ಆದ್ದರಿಂದ ನಮ್ಮ ಜಾಗದಲ್ಲಿ ನಾವು ಇದ್ದೇವೆ. ನಾವು ಯಾವ ಸರ್ಕಾರಿ ಜಾಗವನ್ನೂ ಒತ್ತುವರಿ ಮಾಡಿಲ್ಲ. ಈ ಜಾಗ ನಮ್ಮದು ಎನ್ನುವುದಕ್ಕೆ ನಮ್ಮ ಬಳಿ ಎಲ್ಲಾ ದಾಖಲಾತಿಗಳು ಇವೆ. ನಮ್ಮ ಸೈಟ್ ಮುಂದೆ ಸರ್ಕಾರಿ ರಸ್ತೆ ಇದೆ ಎಂದು ತಿಳಿಸಲಾಗಿದೆ. ಆದ್ದರಿಂದ ನಾವು ಪಿಟ್ ಗುಂಡಿ ನಿರ್ಮಾಣ ಮಾಡಿದ್ದೇವೆ ಎಂದು ಮನೆಯೊಡತಿ ಸ್ಪಷ್ಟಪಡಿಸಿದರು.
ಒತ್ತುವರಿ ತೆರವುಗೊಳಿಸುವ ವೇಳೆ ಅಧಿಕಾರಿಗಳು ಹಾಗೂ ಒತ್ತುವರಿದಾರರಿಂದ ಕೆಲಕಾಲ ವಾದ ವಿವಾದ ನಡೆಯಿತು. ಪೊಲೀಸ್ ಅಧಿಕಾರಿಗಳ ಸಹಕಾರದಿಂದ ಒತ್ತುವರಿ ತೆರವು ಮಾಡಲಾಯಿತು.