ದೊಡ್ಡಬಳ್ಳಾಪುರ: ಜಾನುವಾರುಗಳಲ್ಲಿ ಚರ್ಮಗಂಟು ರೋಗ ಬಾರದಂತೆ ತಡೆಯಲು ಲಸಿಕೆ ನೀಡುತ್ತಿದ್ದೇವೆ, ಗಾಳಿ, ನೀರಿನ ಮೂಲಕ ಹರಡುವ ಈ ರೋಗದ ಬಗ್ಗೆ ಎಚ್ಚರಿಕೆ ವಹಿಸುವುದು ಅತಿ ಅಗತ್ಯ ಎಂದು ಬಾಶೆಟ್ಟಿಹಳ್ಳಿ ಪಶು ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿ ಮಂಜುನಾಥ ಹೇಳಿದರು.
ಮೋಪರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಬಾಶೆಟ್ಟಿಹಳ್ಳಿ ಪಶು ಚಿಕಿತ್ಸಾಲಯದ ವತಿಯಿಂದ ಹಮ್ಮಿಕೊಂಡಿದ್ದ ರಾಸುಗಳಿಗೆ ಉಚಿತ ಲಸಿಕೆ ಮತ್ತು ಪಶು ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,
ಚರ್ಮ ಗಂಟು ರೋಗ ಗಾಳಿ, ನೀರಿನ ಮೂಲಕ ಹರಡುವ ಸಾಧ್ಯತೆ ಇರಬಹುದು, ಹೀಗಾಗಿ ರೈತರು ಒಂದು ಊರಿನಿಂದ ಮತ್ತೊಂದು ಊರಿಗೆ ಪಶುಗಳನ್ನು ಸಾಗಾಣಿಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು ಎಂದರು.
ಕಚ್ಚುವ ನೊಣ, ಸೊಳ್ಳೆಗಳ ಮೂಲಕ ಹರಡುವ ಕಾರಣ ಜಾಗೃತೆ ವಹಿಸಿದರೆ ಒಳ್ಳೆಯದು ಜೊತೆಗೆ ಜಾನುವಾರುಗಳ ಹಟ್ಟಿಯನ್ನು ಸ್ವಚ್ಛವಾಗಿಡುವುದು, ಕೊಟ್ಟಿಗೆಯ ಸಮೀಪ ಗೊಬ್ಬರದ ರಾಶಿ ಹಾಕದೆ ಸೊಳ್ಳೆಯ ನಿಯಂತ್ರಣ ಮಾಡಬೇಕು. ಇನ್ನು ಗೊಬ್ಬರದ ನೀರು ಶೇಖರಣೆ ಆಗುವ ಜಾಗದಲ್ಲಿ ಕೀಟನಾಶಕ ಅಥವಾ ಸೀಮೆ ಎಣ್ಣೆಯನ್ನು ಹಾಕಿ ಮೊಟ್ಟೆ ಬೆಳೆಯದಂತೆ ನೋಡಿಕೊಳ್ಳಬೇಕು ಎಂದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಡಾ.ಎಂ ಚಿಕ್ಕಣ್ಣ, ನಿರ್ದೇಶಕರಾದ ಎಂ.ಮಾರಪ್ಪ, ನಾರಾಯಣಪ್ಪ , ಸಂಘದ ಸಿಬ್ಬಂದಿ ಶರಣ್ ರಾಜ್ ಎಂ ಸೇರಿದಂತೆ ಮತ್ತಿತರರು ಹಾಜರಿದ್ದರು.