ಮನುಷ್ಯನಿಗೆ ಕಂಠದಲ್ಲಿ ಉಸಿರು ಇರೋವರೆಗೆ ಮಾತ್ರ ಬೆಲೆ, ಸತ್ತ ಮೇಲೆ ಬೆಲೆ ಇದ್ದರೂ ಅದನ್ನು ಬದಿಗೊತ್ತಿ ಮೂರು ಕಾಸಿಗೂ ಬೆಲೆ ಇಲ್ಲದ ಹಾಗೆ ನಡೆಸಿಕೊಳ್ಳುವ ಉದಾಹರಣೆ ಕಂಡಿದ್ದೇವೆ. ಅದೇ ರೀತಿ ಬದುಕಿದ್ದಾಗ ಭೂಮಿ ಮೇಲೆ ಏನಿಕ್ಕೆ ಇದಾನೋ ಎಂದು ಹೇಳಿ ಸತ್ತಾಗ ಹೋದ್ನಲ್ಲಪ್ಪಾ…. ಎಂದು ಮೊಸಳೆ ಕಣ್ಣೀರಿಡುವವರನ್ನು ಕಂಡಿದ್ದೇವೆ. ಮನುಷ್ಯ ಸತ್ತ ಮೇಲೆ ನಗು ನಗುತಾ.. ಕಳುಹಿಸಿಕೊಟ್ಟರೆ ಮುಕ್ತಿ ಸಿಗುತ್ತೆ ಎಂಬ ಮಾತಿದೆ, ಅದು ಎಷ್ಟು ಸರಿನೋ ಗೊತ್ತಿಲ್ಲ.
ನಮ್ಮೂರಲ್ಲಿ ಒಂದು ಮುಕ್ತಿಧಾಮ ಇದೆ, ಇದು ಆರಂಭವಾದಾಗ ಶವಗಳನ್ನು ಸುಡುವ ಕಾಯಕಕ್ಕೆ ಗಂಡ-ಹೆಂಡತಿ ತೊಡಗಿಸಿಕೊಂಡಿರುತ್ತಾರೆ. ಏಳು ವರ್ಷಗಳ ಹಿಂದೆ ಗಂಡ ಅದೇ ಸ್ಥಳದಲ್ಲಿ ಮರಣ ಹೊಂದುತ್ತಾರೆ. ತನ್ನ ಗಂಡ ಇಲ್ಲ ಎಂದು ಬೇರೆಡೆ ಹೋಗಿ ಕೆಲಸ ಮಾಡದೇ ಅದೇ ಕೆಲಸವನ್ನು ಒಬ್ಬೊಂಟಿಯಾಗಿ ಸತತವಾಗಿ ಏಳು ವರ್ಷಗಳಿಂದ ಅಸುನೀಗಿದ ಶವಗಳಿಗೆ ಹಮ್ಮು-ಬಿಮ್ಮು ಇಲ್ಲದೇ ಧೈರ್ಯದಿಂದ ಆಧುನಿಕ ಹರಿಶ್ಚಂದ್ರನಂತೆ ಮುಕ್ತಿ ನೀಡುವ ಕಾಯಕ ಮಾಡಿಕೊಂಡು ಬರುತ್ತಿರುವ ವ್ಯಕ್ತಿ ಯಾರೆಂದರೆ ಅವರೆ ದಿಟ್ಟ ಮಹಿಳೆ ಲಕ್ಷ್ಮಮ್ಮ.
ಈಕೆ ಸುಮಾರು 7 ವರ್ಷಗಳಿಂದ ಹೆಣ ಸುಡುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಸಹಾಯಕನಿಂದ ಮೊದಲೆ ಶವ ಸುಡುವ ಸಿಲಿಕಾನ್ ಪೆಟ್ಟಿಗೆಯಲ್ಲಿ ಕಟ್ಟಿಗೆಯನ್ನು ಜೋಡಿಸಿ ಇಟ್ಟಿಕೊಂಡಿರುತ್ತಾರೆ ಶವ ಬಂದ ಕೂಡಲೇ ವಿಧಿ ವಿಧಾನಾಗಳನ್ನು ಪೂರೈಸಿ ಸುಡಲಾಗುತ್ತದೆ. ಒಂದು ಹೆಣ ಸಂಪೂರ್ಣವಾಗಿ ಸುಡಲು 5ರಿಂದ 6ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಅಂತ್ಯ ಸಂಸ್ಕಾರ ಮುಗಿದ ಕೂಡಲೇ ಬೂದಿಯನ್ನು ತೆಗೆದು ಸಿಲಿಕಾನ್ ಪೆಟ್ಟಿಗೆ ಸ್ವಚ್ಚಗೊಳಿಸಿ ಮತ್ತೊಂದು ಶವದ ಸಂಸ್ಕಾರಕ್ಕೆ ಅಣಿಯಾಗುತ್ತಾರೆ, ಇಲ್ಲಿಯ ವರೆಗೂ ಸುಮಾರು 5 ಸಾವಿರಕ್ಕೂ ಹೆಚ್ಚು ಶವಗಳಿಗೆ ಮುಕ್ತಿ ಕಲ್ಪಿಸಿದ ಕೀರ್ತಿ ಲಕ್ಷ್ಮಮ್ಮ ದಂಪತಿಗೆ ಸಲ್ಲುತ್ತದೆ.
2019-2020 ವೇಳೆಗೆ ಕೋವಿಡ್ -19 ಸಾಂಕ್ರಾಮಿಕ ರೋಗದ ಅಟ್ಟಹಾಸ ಹೆಚ್ಚಾಗಿ ಪ್ರತಿನಿತ್ಯ ಸಾವಿಗೀಡಾಗುವವರ ಸಂಖ್ಯೆ ಏರುತ್ತಲೆ ಇತ್ತು, ಜಿಲ್ಲಾಡಳಿತಕ್ಕೆ ಕೋವಿಡ್‌ನಿಂದ ಮೃತಪಟ್ಟವರ ಶವ ಸಂಸ್ಕಾರ ಮಾಡುವುದು ದೊಡ್ಡ ತಲೆ ನೋವಾಗಿ ಪರಣಮಿಸಿತ್ತು, ಆಗ ಸಹಕಾರ ನೀಡಿದ್ದು ಇದೇ ಮುಕ್ತಿಧಾಮದಲ್ಲಿ ಕೆಲಸ ಮಾಡುವ ಲಕ್ಷ್ಮಮ್ಮ.
ಕೋವಿಡ್ ಸಂದರ್ಭದಲ್ಲಿ ಮುಕ್ತಿಧಾಮದ ಮುಂದೆ ಪ್ರತಿ ನಿತ್ಯ ಶವಗಳು ದಹನಕ್ಕೆ ಸಾಲುಗಟ್ಟಿ ನಿಲ್ಲುತ್ತಿದ್ದವು, ಈ ಸಂದರ್ಭದಲ್ಲಿ ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆ ಸಹಜ ಸಾವಿಗೀಡಾದವರ ಅಂತ್ಯ ಸಂಸ್ಕಾರಕ್ಕೆ ಸಮಯ ನಿಗದಿ ಮಾಡಿ ಮತ್ತೆ ಸಂಜೆ 5 ರಿಂದ ಮಧ್ಯ ರಾತ್ರಿ ಸುಮಾರು 12 ರಿಂದ 1 ಗಂಟೆಯ ವರೆಗೆ ದೇವಾಂಗ ಮಂಡಳಿ , ತಾಲ್ಲೂಕು ಆಡಳಿತ, ನಗರಸಭೆ ಸಹಕಾರದೊಂದಿಗೆ ಲಕ್ಷ್ಮಮ್ಮ ನೂರಾರು ಶವಗಳ ಸಂಸ್ಕಾರ ನೆರವೇರಿಸಿದ್ದಾರೆ.
ಇವರ ಸೇವೆಗೆ ಮೆಚ್ಚಿ ಹಲವು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿದೆ. ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತ ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಪ್ರಶಸ್ತಿಗಳನ್ನು ನೀಡಿದ್ದಾರೆ.
ಒಟ್ಟಾರೆ ಈಕೆ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಒಬ್ಬ ಮಹಿಳೆ ಎಲ್ಲಾ ಕೆಲಸವನ್ನು ಮಾಡಬಹುದು ಎಂದು ತೋರಿಸಿಕೊಟ್ಟ ಮಹಿಳೆ. ಆದ್ದರಿಂದ ಈಕೆಯ ಸೇವೆಗೆ ನನ್ನದೊಂದು ಸಲಾಮ್.