ಟೌನ್ ಶಿಪ್ ಅಭಿವೃದ್ಧಿಪಡಿಸಲು ಕಸಬಾ ಹೋಬಳಿ ಹಾಗೂ ದೊಡ್ಡಬೆಳವಂಗಲ ಹೋಬಳಿಯಲ್ಲಿ ಸ್ಥಳ ಪರಿಶೀಲಿಸಿದ ಡಿಸಿಎಂ ಡಿಕೆಶಿ

ದೊಡ್ಡಬಳ್ಳಾಪುರ: ಬೆಂಗಳೂರಿನ ಸುತ್ತಲು ಟೌನ್ ಶಿಪ್ ಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬುಧವಾರ ಅಧಿಕಾರಿಗಳೊಂದಿಗೆ ತಾಲ್ಲೂಕಿನ ಕಸಬಾ ಹೋಬಳಿ ಹಾಗೂ ದೊಡ್ಡಬೆಳವಂಗಲ ಹೋಬಳಿಯಲ್ಲಿ ಸ್ಥಳ ಪರಿಶೀಲನೆ ನಡೆಸಿದರು.

ಈ ಬಗ್ಗೆ ಮಾಹಿತಿ ನೀಡಿರುವ ದೊಡ್ಡಬಳ್ಳಾಪುರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಚುಂಚೇಗೌಡ, ಬೆಂಗಳೂರಿನಲ್ಲಿ ವಸತಿಯ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜಧಾನಿಯ ಸುತ್ತಲಿನ ತಾಲ್ಲೂಕುಗಳಲ್ಲಿ ಹೈಟೆಕ್ ಸೌಲಭ್ಯಗಳನ್ನು ಒಳಗೊಂಡ ಟೌನ್ಶಿಪ್ ಗಳನ್ನು ನಿರ್ಮಿಸುವ ಸರ್ಕಾರದ ಯೋಜನೆಯ ಭಾಗವಾಗಿ ಕಸಬಾ ಹೋಬಳಿಯ ರಾಜಘಟ್ಟ, ತಿಮ್ಮಸಂದ್ರ ಗ್ರಾಮ, ಹಾಗೆಯೇ ದೊಡ್ಡಬೆಳವಂಗಲ ಹೋಬಳಿಯ ಸಕ್ಕರೆಗೊಲ್ಲಹಳ್ಳಿ, ಸೊಣ್ಣೇನಹಳ್ಳಿ ಗ್ರಾಮಗಳ ಸಮೀಪ ಸ್ಥಳ ವೀಕ್ಷಣೆ ಮಾಡಲಾಗಿದೆ ಎಂದರು.

ಈ ಹಿಂದಿನ ಸರ್ಕಾರದಲ್ಲಿ ಬೆಂಗಳೂರು ಸುತ್ತಲಿನ ತಾಲ್ಲೂಕುಗಳನ್ನು ಹಾದುಹೋಗುವಂತೆ ರಿಂಗ್ ರಸ್ತೆ ನಿರ್ಮಾಣಕ್ಕೆ ನೀಲನಕ್ಷೆ ಗುರುತಿಸಲಾಗಿತ್ತು. ಈ ರಿಂಗ್ ರಸ್ತೆಯು ರಾಮನಗರ ಜಿಲ್ಲೆಯ ಸಾತನೂರು ಸಮೀಪದಿಂದ ಪ್ರಾರಂಭವಾಗಿ ಬಿಡದಿ, ಮಾಗಡಿ, ಸೋಲೂರು, ದಾಬಸ್ ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ನಂದಗುಡಿ, ಆನೇಕಲ್ ತಾಲ್ಲೂಕಿನ ಮೂಲಕ ಮತ್ತೆ ಸಾತನೂರು ಸೇರಲಿದೆ ಎಂದರು.

ರಿಂಗ್ ರಸ್ತೆ ನಿರ್ಮಾಣದಿಂದ ಅಂತರ ರಾಜ್ಯಗಳ ಹೆದ್ದಾರಿ, ವಿಮಾನ ನಿಲ್ದಾಣವನ್ನು ಸುಲಭವಾಗಿ ತಲುಪಬಹುದಾಗಿದೆ. ನೂತನ ಟೌನ್ ಶಿಪ್ ಗಳನ್ನು ಸಹ ರಿಂಗ್ ರಸ್ತೆಗೆ ಸಮೀಪದಲ್ಲೇ ನಿರ್ಮಿಸುವ ಉದ್ದೇಶದೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಯಾವುದನ್ನು ಇನ್ನು ಅಂತಿಮಗೊಳಿಸಿಲ್ಲ. ಟೌನ್ ಶಿಪ್ ನಿರ್ಮಾಣದ ಸಾಧ್ಯತೆ, ಅನುಕೂಲಗಳ ಕುರಿತಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿದ ನಂತರ ಶೀಘ್ರದಲ್ಲೇ ಅಂತಿಮಗೊಳ್ಳಲಿದೆ ಎಂದರು.

ಸ್ಥಳ ಪರಿಶೀಲನೆ ಸಂದರ್ಭದಲ್ಲಿ ನಗರಾಭಿವೃದ್ಧಿ ಹಾಗೂ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *