ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಲಂಚಗುಳಿತನ ವಿರೋಧಿಸಿ ಹಾಗೂ ಶಾಸಕ ವಿರುಪಾಕ್ಷಪ್ಪ ಮಾಡಾಳ್ ಬಂಧನಕ್ಕೆ ಒತ್ತಾಯಿಸಿ ಮಾ.9 ರಂದು ಕಾಂಗ್ರೆಸ್ ಪಕ್ಷದ ವತಿಯಿಂದ ಎರಡು ಗಂಟೆಗಳ ಕಾಲ ಸ್ವಯಂಪ್ರೇರಿತ ಬಂದ್ ಆಚರಿಸಲಾಗುವುದು ಎಂದು ಕೆಪಿಸಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಲಕ್ಷೀಪತಿ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತುರ್ತು ಹಾಗೂ ಅಗತ್ಯ ಸೇವೆ ಹೊರತುಪಡಿಸಿ ಎಲ್ಲ ರೀತಿಯ ವ್ಯಾಪಾರ ವಹಿವಾಟು ಸ್ಥಳಿತಗೊಳಿಸಲಾಗುವುದು. ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಬೆಳಿಗ್ಗೆ 9 ಗಂಟೆಗೆ ನಗರದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ‌್ಯಾಲಿ ನಡೆಸಲಾಗುವುದು. ಬೆಳಿಗ್ಗೆ 11 ಗಂಟೆಗೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಬಿಜೆಪಿ ಶಾಸಕರ ಕಚೇರಿ ಹಾಗೂ ಮನೆಯಲ್ಲಿ ಅಕ್ರಮ ಹಣ ಪತ್ತೆಯಾದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. 40 ಪರ್ಸೆಂಟ್ ಕಮಿಷನ್ ಆರೋಪ ಋಜುವಾತಾದರೂ ಪೊಲೀಸ್ ಇಲಾಖೆ ಆರೋಪಿತ ಶಾಸಕರನ್ನು ಬಂಧಿಸಿಲ್ಲ. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಂದ್ ಗೆ ಕರೆ ನೀಡಲಾಗಿದೆ. ಎರಡು ಗಂಟೆಗಳ ಕಾಲ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
40% ಕಮಿಷನ್ ವಸೂಲಿ ಮಾಡುವ ಕುರಿತಂತೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಖಾಸಗಿ ಅನುದಾನರಹಿತ ಶಾಲಾ ಕಾಲೇಜುಗಳ ಸಂಘ(ರುಕ್ಸಾ), ಮಠಾಧೀಶರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಈಗ ಶಾಸಕರ ಪುತ್ರ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದಾರೆ. ಶಾಸಕರ ದೂರವಾಣಿ ಸಂಭಾಷಣೆ ಕೂಡ ಇದೆ. ಮುಖ್ಯಮಂತ್ರಿಗಳು ಇನ್ನೂ ದಾಖಲೆ, ಸಾಕ್ಷಿ ಕೇಳುವುದಾದರೆ ಇದಕ್ಕಿಂತ ನಾಚಿಕೆಕೇಡು ಬೇರೊಂದಿಲ್ಲ ಆರೋಪ ಮಾಡಿದ್ದರು. ಸಿಎಂ ದಾಖಲೆ, ಸಾಕ್ಷಿ ಕೇಳಿದ್ದರು.
ಕರ್ನಾಟಕಸಾಬೂನು ಮತ್ತುಮಾರ್ಜಕ ಮಂಡಳಿ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ ದಾಕಲೆ ಸಮೇತ ಸಿಕ್ಕಿಬಿದ್ದಿದ್ದಾರೆ. ಲೊಕಾಯುಕ್ತರ ವಶಪಡಿಸಿರುವ ದಾಖಲೆಗಳೇ ಸಾಕ್ಷಿ. ಇದಕ್ಕಿಂತ ಬೇರೆ ದಾಖಲೆ ಕೇಳಿದರೆ ಅದಕ್ಕಿಂತ ನಾಚಿಕೆ ಬೇರೊಂದಿಲ್ಲ ಎಂದು ಕಿಡಿಕಾರಿದರು.
ಮಾ.9 ರಂದು ಸಾಂಕೇತಿಕವಾಗಿ ರಾಜ್ಯದಾದ್ಯಂತ ಬಂದ್ ಆಚರಿಸಲಾಗುವುದು. ಅಷ್ಟರಲ್ಲಿ ಶಾಸಕರನ್ನು ಬಂಧಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಎಂದಿನಂತೆ ಶಾಲಾ, ಕಾಲೇಜು, ವೈದ್ಯಕೀಯ ಸೇವೆ, ಸಾರಿಗೆ ಕಾರ್ಯನಿರ್ವಹಿಸಲಿವೆ.
ಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಬಿ.ಜಿ. ಹೇಮಂತರಾಜು, ಗ್ರಾಮಾಂತರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಬೈರೇಗೌಡ, ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಿ ವೆಂಕಟೇಶ್,ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ.ಜಗನ್ನಾಥ್, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೆಂಪಣ್ಣ, ರಮೇಶ್, ಮಂಜುನಾಥ್, ಕುಮಾರ್, ಅಖಿಲೇಶ್ ಸೇರಿದಂತೆ ಇತರರು ಇದ್ದರು.