ಸರ್ಕಾರಿ ಭೂಮಿ ಸಂರಕ್ಷಣೆ ಹಾಗೂ ಒತ್ತುವರಿ ತೆರವುಗೊಳಿಸಲು ‘ಲ್ಯಾಂಡ್‍ ಬೀಟ್’ ವ್ಯವಸ್ಥೆ ಅಳವಡಿಕೆ-ಕಂದಾಯ ಸಚಿವ ಕೃಷ್ಣಬೈರೇಗೌಡ

ರಾಜ್ಯದಲ್ಲಿ ಸರ್ಕಾರಿ ಭೂಮಿ ಸಂರಕ್ಷಣೆ ಹಾಗೂ ಒತ್ತುವರಿ ತೆರವು ಮಾಡುವ ನಿಟ್ಟಿನಲ್ಲಿ ಕಂದಾಯ ಇಲಾಖೆ ದೇಶದಲ್ಲಿಯೇ ನೂತನವಾಗಿ ಲ್ಯಾಂಡ್‍ ಬೀಟ್ ವ್ಯವಸ್ಥೆಯನ್ನು ಅಳವಡಿಸಿದ್ದು, ಮೊಬೈಲ್‍ ಆ್ಯಪ್‍ ಮೂಲಕ ಗ್ರಾಮಗಳ ಹಾಗೂ ಸರ್ವೆ‍ ಸಂಖ್ಯೆಗಳ ಪ್ರಕಾರದಂತೆ ದಾಖಲೀಕರಣ ಮಾಡಲಾಗುತ್ತಿದೆ. ಮಾರ್ಚ್ ತಿಂಗಳಿನಿಂದ ಇಲ್ಲಿಯವರೆಗೆ 14 ಲಕ್ಷ ಸರ್ಕಾರಿ ಜಾಗಗಳನ್ನು  ಅಪ್ಲೋ ಡ್‍ ಮಾಡಲಾಗಿದ್ದು, ಇದರಲ್ಲಿ 5.9 ಲಕ್ಷ ಜಾಗಗಳನ್ನು ಮೊಹಜರು ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಗ್ರಾಮಗಳಿಗೆ ಭೇಟಿ ನೀಡಿ, ಕಂದಾಯ ಅಧಿಕಾರಿಗಳೊಂದಿಗೆ ಲ್ಯಾಂಡ್‍ ಬೀಟ್ ಹಾಗೂ ಆಧಾರ್‍ ಸೀಡಿಂಗ್‍ ವ್ಯವಸ್ಥೆಯನ್ನು ಪರಿಶೀಲಿಸಿ ಮಾತನಾಡಿದ ಅವರು, ಸರ್ಕಾರಿ ಭೂಮಿ ಭದ್ರತೆ ತಳಹಂತದಿಂದಲೇ  ಭದ್ರಪಡಿಸಬೇಕು ಎನ್ನುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದರು.

ಯಾವ ಸರ್ವೇ ನಂಬರ್‍ ಒತ್ತುವರಿಯಾಗಿದೆ ಎಂದು ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲಿಸಿ, ಜಿಪಿಎಸ್‍ ಮುಖಾಂತರ ವರದಿ ನೀಡಲಿದ್ದಾರೆ. ಕೆರೆ, ಸ್ಮಶಾನ ಇತರೆ ಸರ್ಕಾರಿ ಭೂಮಿಯ ಬಳಿ ಸುತ್ತಾಡುವ ಮೂಲಕ ಒತ್ತುವರಿಯನ್ನು ಗುರುತಿಸಬಹುದಾಗಿದೆ. ಒತ್ತವರಿ ಗುರುತಿಸಿರುವ ಕುರಿತು ಆನ್ ಲೈನ್ ಮೂಲಕವೇ ಜಿಲ್ಲಾಧಿಕಾರಿಗಳಿಗೆ ಹೋಗಲಿದೆ. ಈ ಮಾಗಹಿತಿ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ಸರ್ವೇ ಇಲಾಖೆಯಿಂದ ಸ್ಥಳ ನಕ್ಷೆ ತಯಾರಿಸಿ ಒತ್ತುವರಿ ತೆರವು ಮಾಡಿಸಲಿದ್ದಾರೆ. ಪ್ರತಿ ಮೂರು ತಿಂಗಳಿಗೊಮ್ಮೆ ಈ ಪ್ರಕ್ರಿಯೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದರು.

ಆರ್‍.ಟಿ.ಸಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಅಭಿಯಾನ

ಆರ್‍.ಟಿ.ಸಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ದೃಢೀಕರಣ ನೀಡುವ ಅಭಿಯಾನ ಸಹ ಚಾಲನೆಯಲ್ಲಿದ್ದು, ಈ ಮೂಲಕ ಕೃಷಿ ಆಸ್ತಿಗಳಿಗೆ ಭದ್ರತೆ ನೀಡಲಾಗುತ್ತಿದೆ. ಇದರಿಂದ ಜಮೀನುಗಳ ದಾಖಲೆಗಳಲ್ಲಿ ಆಗಬಹುದಾದ  ವಂಚನೆಗಳನ್ನು ತಡೆಗಟ್ಟಬಹುದಾಗಿದೆ. ರಾಜ್ಯದಲ್ಲಿನ 4ಕೋಟಿ 30 ಲಕ್ಷ ಕೃಷಿ ಆಸ್ತಿಗಳ ಮಾಲೀಕತ್ವಕ್ಕೆ 1ಕೋಟಿ 40 ಲಕ್ಷ ಆಸ್ತಿಗಳ  ಆರ್‍.ಟಿ.ಸಿಗೆ ಆಧಾರ್‍ ಸಂಖ್ಯೆಯನ್ನು ದೃಢೀಕರಿಸಿ ಜೋಡಣೆ ಮಾಡಲಾಗಿದೆ. ಈ ವ್ಯವಸ್ಥೆಯಿಂದ ಜನರು ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ ಎಂದು ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ, ಜಿಲ್ಲಾಧಿಕಾರಿ ಎನ್.ಶಿವಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ಎಂ.ಶ್ರೀನಿವಾಸ್, ತಹಶೀಲ್ದಾರ್ ವಿಭಾವಿದ್ಯಾರಾಥೋಡ್, ಶಾಸಕ ಧೀರಜ್ ಮುನಿರಾಜ್, ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಭೂಮಿ ಉಸ್ತುವಾರಿ ಯೋಜನಾ ವ್ಯವಸ್ಥಾಪಕ ಸುರೇಶ್ ನಾಯರ್, ತಹಶೀಲ್ದಾರ್ ವಿಶ್ವೇಶ್ವರರೆಡ್ಡಿ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ.ಚುಂಚೇಗೌಡ ಇದ್ದರು.

Leave a Reply

Your email address will not be published. Required fields are marked *