ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಸೋಲದೇವನಹಳ್ಳಿ ಗ್ರಾಮದ ಮಾರಮ್ಮ ದೇವಿಯ ದೇವಸ್ಥಾನದಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದು, ದೇವಿ ವಿಗ್ರಹ ಕೊರಳಲಿದ್ದ ತಾಳಿ, ಲಕ್ಷಾಂತರ ಹಣವಿದ್ದ 2 ಹುಂಡಿಗಳನ್ನು ಕದ್ದು, ಸಿ ಸಿ ಕ್ಯಾಮೆರಾದ ಡಿವಿಆರ್ ಸಹ ಕದ್ದು ಪರಾರಿಯಾಗಿದ್ದಾರೆ.
ಸಾವಿರಾರು ಭಕ್ತರನ್ನು ಹೊಂದಿರುವ ಈ ಮಾರಮ್ಮ ದೇವಿಯ ದೇವಸ್ಥಾನ ಕಳೆದ 4 ತಿಂಗಳ ಹಿಂದಷ್ಟೆ 45 ಲಕ್ಷ ರೂ.ಗಳ ವೆಚ್ಚದಲ್ಲಿ ಮರು ನಿರ್ಮಾಣವಾಗಿದ್ದು, ಅದ್ದೂರಿ ಜೀರ್ಣೋದ್ಧಾರದ ಜೊತೆಗೆ ದೇವಿಯ ಜಾತ್ರೆ ಸಹ ನಡೆದಿತ್ತು.
ಜಾತ್ರೆಯಲ್ಲಿ ಸಾವಿರಾರು ಜನರು ಭಾಗವಹಿದ್ದ ಹಿನ್ನೆಲೆ ಎರಡೂ ಹುಂಡಿಗಳಲ್ಲಿ ಲಕ್ಷಾಂತರ ಹಣ ಸಂಗ್ರಹವಾಗಿತ್ತು ಎನ್ನಲಾಗಿದೆ.
ಮಾರಮ್ಮ ದೇವಸ್ಥಾನದಲ್ಲಿ ಕಳ್ಳತನವಾಗಿರುವುದು ಭಕ್ತರು ಹಾಗೂ ಸೋಲದೇವನಹಳ್ಳಿ ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.
ನೆಲಮಂಗಲ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ರಾಜೀವ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.