ಗುಂಡಿಮಯವಾದ ತೂಬಗೆರೆ-ಮಂಚೇನಹಳ್ಳಿ ರಸ್ತೆ-ಹದಗೆಟ್ಟ ರಸ್ತೆಯಿಂದಾಗಿ ಬೇಸತ್ತ ಗ್ರಾಮಸ್ಥರು- ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ

ತಾಲೂಕಿನ ತೂಬಗೆರೆ -ಮಂಚೇನಹಳ್ಳಿ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದರಿಂದ ವಾಹನ ಸವಾರರು ನಿತ್ಯ ಮಳೆ ನೀರು ತುಂಬಿದ ಗುಂಡಿಗಳಲ್ಲಿ ಅಪಘಾತ ಭಯದಲ್ಲಿ ಸಂಚಾರ ನಡೆಸುವಂತಾಗಿದೆ. ಆದ್ದರಿಂದ ಕೂಡಲೇ ರಸ್ತೆ ದುರಸ್ತಿ ಮಾಡಿಸುವಂತೆ ಒತ್ತಾಯಿಸಿ ಇಂದು ಬೆಳಗ್ಗೆ ಗ್ರಾಮಸ್ಥರು ಹಾಗೂ ವಾಹನ ಸವಾರರು ಪ್ರತಿಭಟನೆ ನಡೆಸಿದರು.

ತೂಬಗೆರೆ ಭಾಗದಲ್ಲಿ ಎರಡು ವಾರದಿಂದ ಸುರಿದ ಮಳೆಯಿಂದಾಗಿ ರಸ್ತೆ ಹದಗೆಟ್ಟಿದ್ದು, ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ರಸ್ತೆ ದುರಸ್ತಿ ಮಾಡಿಸುವಂತೆ ಸತತ ಮೂರ್ನಾಲ್ಕು ವರ್ಷದಿಂದ ಸಾಕಷ್ಟು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗೂ ಕೆಲ ದಿನಗಳ ಹಿಂದೆ ರಸ್ತೆಗೆ ತೇಪೆ ಹಾಕಿ ಕೈತೋಳೆದುಕೊಂಡಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನಕ್ಕೆ ಬೇಸತ್ತ ಗ್ರಾಮಸ್ಥರು ಶುಕ್ರವಾರ ರಸ್ತೆಯಲ್ಲೇ ಪ್ರತಿಭಟನೆ ನಡೆಸಿದರು. ಈ ಮೂಲಕವಾದರೂ ಶಾಸಕರು ಹಾಗೂ ಸರ್ಕಾರ ಇತ್ತ ಗಮನ ಹರಿಸುತ್ತಾರೆಯೇ ಎಂಬುದು ಗ್ರಾಮಸ್ಥರ ಆಶಯವಾಗಿದೆ.

ರಸ್ತೆ ಹಾಳಾಗಿರುವುದರಿಂದ ದಿನನಿತ್ಯ ಸುಗಮ ಸಂಚಾರ ನಡೆಸಲು ಸಹ ಕಷ್ಟವಾಗಿದೆ. ಅಲ್ಲದೇ ಸೋಮವಾರ ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲು ಗ್ರಾಮಸ್ಥರು ಹರಸಾಹಸವನ್ನೇಪಟ್ಟಿದ್ದಾರೆ ಎಂದು ಪ್ರತಿಭಟನಾನಿರತರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *