ಸ್ವಚ್ಛತೆ ಇದ್ದಲ್ಲಿ‌ ಆರೋಗ್ಯ ಇರುತ್ತದೆ-ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುನೀಲ್ ಕುಮಾರ್

ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತ ಮುತ್ತ ಕೊಳಚೆ ನೀರು ನಿಂತುಕೊಳ್ಳದಂತೆ ಜಾಗೃತಿವಹಿಸುವುದು, ಸೊಳ್ಳೆ ಉತ್ಪತ್ತಿಯಾಗದಂತೆ ನಿಗಾವಹಿಸುವುದು ಹಾಗೂ ಸೊಳ್ಳೆ ಕಡಿತಕ್ಕೆ ಒಳಗಾಗದಂತೆ ರಕ್ಷಣೆ ಮಾಡಿಕೊಳ್ಳುವುದರಿಂದ ಮಲೇರಿಯಾ ತಡೆಗಟ್ಟಬಹುದು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುನೀಲ್ ಕುಮಾರ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಶ್ವ ಮಲೇರಿಯಾ ದಿನ ದ ಅಂಗವಾಗಿ “ಹೆಚ್ಚು ಸಮಾನತೆಯ ಜಗತ್ತಿಗೆ, ಮಲೇರಿಯಾ ವಿರುದ್ಧದ ಹೋರಾಟವನ್ನು ತೀವ್ರಗೊಳಿಸೋಣ” ಎಂಬ ಘೋಷವಾಕ್ಯದೊಂದಿಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಸಾಂಕ್ರಾಮಿಕ ಕಾಯಿಲೆಗಳಲ್ಲಿ ಮಲೇರಿಯಾ ಒಂದು. ಸಾಂಕ್ರಾಮಿಕ ಕಾಯಿಲೆಗಳು ಸೊಳ್ಳೆಗಳಿಂದ ಹರಡುತ್ತವೆ. ಅನಾಫಿಲಸ್ ಜಾತಿಗೆ ಸೇರಿದ ಹೆಣ್ಣು ಸೊಳ್ಳೆಗಳಿಂದ ಮಲೇರಿಯಾ ಸಾಂಕ್ರಾಮಿಕ ಕಾಯಿಲೆ ಬರುತ್ತದೆ. ಮಲೇರಿಯಾ ಕಾಯಿಲೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಆರೋಗ್ಯ ಇಲಾಖೆ ವಿಶ್ವ ಮಲೇರಿಯಾ ದಿನಾಚರಣೆಯನ್ನು ಆಚರಿಸುವ ಮೂಲಕ ಜನರಿಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದೆ ಎಂದರು.

ಹರಿಯದೆ ನಿಂತುಕೊಳ್ಳುವ ಕೊಳಚೆ ನೀರು, ಮನೆಯ ಸುತ್ತಮುತ್ತಲಿನ ಪರಿಸರ ಸ್ವಚ್ಛತೆ ಇಲ್ಲದ ಸ್ಥಳಗಳಲ್ಲಿ ಮಲೇರಿಯಾ ಹರಡುವ ಸೊಳ್ಳೆಗಳು ಉತ್ಪಪತ್ತಿಯಾಗುತ್ತವೆ. ಸೊಳ್ಳೆ ಒಬ್ಬನಿಂದ ಮತ್ತೊಬ್ಬನಿಗೆ ಕಡಿಯುವ ಮೂಲಕ ಮಲೇರಿಯಾ ಸಾಂಕ್ರಾಮಿಕ ಕಾಯಿಲೆ ಬರುತ್ತದೆ. ಇಂತಹ ಸಂದರ್ಭದಲ್ಲಿ ವ್ಯಕ್ತಿಗೆ ಚಳಿ-ಜ್ವರ ಬರುವ ಲಕ್ಷಣ ಕಾಣಿಸಿಕೊಳ್ಳುತ್ತದೆ. ಕೂಡಲೇ ಹತ್ತಿರದಲ್ಲಿರುವ ಆಸ್ಪತ್ರೆಗೆ ಹೋಗಿ ವೈದ್ಯರಿಂದ ರಕ್ಷ ಪರೀಕ್ಷೆ ಮಾಡಿಸಿಕೊಳ್ಳುವುದರ ಜತೆಯಲ್ಲಿ ಅವರ ಸೂಚನೆಯಂತೆ ಚಿಕಿತ್ಸೆಗೆ ಒಳಗಾಗಬೇಕು ಎಂದು ಸಲಹೆ ನೀಡಿದರು.

ವಿಶ್ವ ಮಲೇರಿಯಾ ದಿನದ ಅರಿವು ಮೂಡಿಸುವ ಸಲುವಾಗಿ ಸರಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಿಂದ ನಗರದ ಟಿ.ಬಿ ವೃತ್ತದ ವರೆಗೆ ಜಾಥಾವನ್ನು ಮಾಡಲಾಯಿತು. ಮಾನವ ನಿರ್ಮಿತ ಸರಪಳಿ ರಚಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ  ತಾಲೂಕು ಆರೋಗ್ಯ ಅಧಿಕಾರಿ ಡಾ.ಶಾರದ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಶಿವಕುಮಾರ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ರಮೇಶ್, ಕೀಟ ಶಾಸ್ತ್ರ ತಜ್ಞರಾದ ಲತಾ, ಆರೋಗ್ಯ ಮೇಲ್ವಿಚಾರಕರಾದ ನಟರಾಜ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *