ರೇವ್ ಪಾರ್ಟಿ ಪ್ರಕರಣ: ತೆಲುಗು ನಟಿ ಹೇಮಾ ಸೇರಿದಂತೆ 86 ಮಂದಿ ಮಾದಕ ದ್ರವ್ಯ ಸೇವನೆ: ರಕ್ತದ ಮಾದರಿಗಳ ಫಲಿತಾಂಶ ಪಾಸಿಟಿವ್

ಇತ್ತೀಚೆಗೆ ಬೆಂಗಳೂರು ಹೊರ ವಲಯದ ಫಾರ್ಮ್‌ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದವರ ರಕ್ತದ ಮಾದರಿಗಳ ಫಲಿತಾಂಶ ಹೊರಬಿದ್ದಿದೆ.

ತೆಲುಗು ನಟಿ ಹೇಮಾ ಸೇರಿದಂತೆ 86 ಮಂದಿ ಮಾದಕ ದ್ರವ್ಯ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ವ್ಯಕ್ತಿಯೊಬ್ಬರ ಹುಟ್ಟುಹಬ್ಬದ ಪಾರ್ಟಿ ನೆಪದಲ್ಲಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಇದರಲ್ಲಿ ಒಟ್ಟು 103 ಮಂದಿ ಪಾಲ್ಗೊಂಡಿದ್ದರು. ಭಾಗವಹಿಸಿದವರಲ್ಲಿ 73 ಪುರುಷರು ಮತ್ತು 30 ಮಹಿಳೆಯರು ಸೇರಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆ ಮೇ 19 ರಂದು ಬೆಳ್ಳಂಬೆಳಗ್ಗೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ಫಾರ್ಮ್‌ಹೌಸ್‌ನಲ್ಲಿ ದಾಳಿ ನಡೆಸಿದ ಪೊಲೀಸರು 1.5 ಕೋಟಿ ಮೌಲ್ಯದ MDMA (Ecstacy) ಮಾತ್ರೆಗಳು, ಹೈಡ್ರೋ ಗಾಂಜಾ, ಕೊಕೇನ್, ಹೈ ಎಂಡ್ ಕಾರುಗಳು, DJ ಉಪಕರಣಗಳು, ಧ್ವನಿ ಮತ್ತು ಬೆಳಕು ಉಪಕರಣಗಳು ಸೇರಿದಂತೆ 1.5 ಕೋಟಿ ರೂ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದರು.

ಪಾರ್ಟಿಯಲ್ಲಿ ಭಾಗವಹಿಸಿದವರ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು, ಇದರಲ್ಲಿ 59 ಪುರುಷರು ಮತ್ತು 27 ಮಹಿಳೆಯರು ಮಾದಕ ದ್ರವ್ಯ ಸೇವನೆ ಕುರಿತಾದಂತಹ ಪರೀಕ್ಷಾ ಫಲಿತಾಂಶ ಪಾಸಿಟಿವ್ ಬಂದಿದೆ ಪೊಲೀಸರು ತಿಳಿಸಿದ್ದಾರೆ. ಪಾಸಿಟಿವ್ ಬಂದಿರುವವರಿಗೆ ಕೇಂದ್ರ ಅಪರಾಧ ವಿಭಾಗವು ನೋಟಿಸ್ ಜಾರಿಯಾಗಲಿದೆ.

ಆದರೆ, ನಾನು ಪಾರ್ಟಿಯಲ್ಲಿರಲಿಲ್ಲ, ಹೈದರಾಬಾದ್ ನ ಫಾರ್ಮ್ ಹೌಸ್ ನಲ್ಲಿದ್ದೇನೆ ಎಂದು ಮೊದಲೊಂದು ವಿಡಿಯೊ ಮಾಡಿ ನಂತರ ನಿನ್ನೆ ಮನೆಯಲ್ಲಿ ಅಡುಗೆ ಮಾಡುತ್ತಿರುವ ವಿಡಿಯೊವನ್ನು ನಟಿ ಹೇಮಾ ಹರಿಬಿಟ್ಟಿದ್ದರು. ಆದರೆ ಅದು ಸುಳ್ಳು, ಅವರು ಜಿ ಆರ್ ಫಾರಂ ಹೌಸ್ ನಲ್ಲಿಯೇ ಇದ್ದಾರೆ ಎಂದು ಇಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಸುದ್ದಿಗೋಷ್ಠಿ ನಡೆಸಿ ರೇವ್ ಪಾರ್ಟಿ ಮೇಲೆ ನಡೆದ ಸಿಸಿಬಿ ಪೊಲೀಸರ ದಾಳಿಯ ಬಗ್ಗೆ ಮಾಹಿತಿ ನೀಡಿದ್ದಾರೆ.

ನಟಿ ಹೇಮಾ, ಜಿಆರ್ ಫಾರಂ ಹೌಸ್ ನಲ್ಲಿ ಇದ್ದಿದ್ದು ನಿಜ ಎಂದಿದ್ದಾರೆ. ಪಾರ್ಟಿಗೆ ಬಂದಿದ್ದ ಎಲ್ಲರ ರಕ್ತ ಪರೀಕ್ಷೆ ಮಾಡಿ ಹೊರಕಳಿಸಿದಾಗ ಹೇಗೋ ಕಣ್ತಪ್ಪಿಸಿ ಹೋಗಿ ಹೇಮಾ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *