ಜಿಂಕೆ ಬಚ್ಚಹಳ್ಳಿ ಗ್ರಾಮದಲ್ಲಿ 16 ಶಕ್ತಿ ದೇವತೆಗಳ ಅದ್ಧೂರಿ ಉತ್ಸವ; ದೇವರ ಉತ್ಸವಕ್ಕೆ ಹರಿದು ಬಂದ ಭಕ್ತಸಾಗರ

ತಾಲೂಕಿನ ಜಿಂಕೆ ಬಚ್ಚಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಷ್ಟಲಕ್ಷ್ಮೀದೇವಿಯವರ ಉತ್ಸವ ಕಾರ್ಯಕ್ರಮದಲ್ಲಿ ಆಂಜನೇಯಸ್ವಾಮಿ ಸೇರಿದಂತೆ 16 ಶಕ್ತಿ ದೇವತೆಗಳ ಉತ್ಸವ ಅತ್ಯಂತ ಸಂಭ್ರಮದಿಂದ ನೆರವೇರಿತು.

ಜಿಂಕೆ ಬಚ್ಚಹಳ್ಳಿ ಗ್ರಾಮಕ್ಕೆ ಆಗಮಿಸಿದ ಶಕ್ತಿ ದೇವತೆಗಳಿಗೆ ಊರಿನ ಹೆಬ್ಬಾಗಿಲಿನಲ್ಲಿ ಹೂವಿನಿಂದ ಸಿಂಗರಿಸಿ ಪೂಜಾ ಕಾರ್ಯಕ್ರಮಗಳು ನಡೆದವು. ಬಳಿಕ ಸುಮಾರು ಜಿಂಕೆ ಬಚ್ಚಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಂದ ಆಗಮಿಸಿದ್ದ ಮಹಿಳೆಯರು ಕಳಸ ಹೊತ್ತು ದೇವತೆಗಳನ್ನು ಊರಿನ ಪ್ರಮುಖ ಬೀದಿಗಳ ಮುಖಾಂತರ ಗ್ರಾಮದ ಆಂಜನೇಯಸ್ವಾಮಿ ದೇವಾಲಯದವರೆಗೂ ಸ್ವಾಗತ ಮಾಡಿದರು.

ಈ ವೇಳೆ ವೀರಭದ್ರ ಸ್ವಾಮಿ ಕುಣಿತ ಎಲ್ಲರ ಗಮನ ಸೆಳೆಯಿತು. ಆಂಜನೇಯಸ್ವಾಮಿ ದೇಗುಲದ ಬಳಿ ಪ್ರತಿಷ್ಟಾಪನೆ ಬಳಿಕ ಶಕ್ತಿದೇವತೆಗಳಾದ ಸಪ್ಪಲ್ಲಮ್ಮ ದೇವಿ, ಪಟಾಲಮ್ಮ ದೇವಿ, ವಿದ್ಯಾಚೌಡೇಶ್ವರಿ ತಾಯಿ, ದೊಡ್ಡಮ್ಮ ತಾಯಿ, ಪಳೇಕಮ್ಮ ತಾಯಿ, ಖಡ್ಗ ಮಹೇಶ್ವರಮ್ಮ ತಾಯಿ, ಮುತ್ಯಾಲಮ್ಮ ತಾಯಿ, ಮಾರಮ್ಮ ತಾಯಿ, ಯಲ್ಲಮ್ಮ ತಾಯಿ, ಕಾಳಮ್ಮ ತಾಯಿ, ಕೆಂಪಮ್ಮ ದೇವಿ, ಗಂಗಮ್ಮ ತಾಯಿ, ಮಹೇಶ್ವರಮ್ಮ ತಾಯಿ, ಚಿಕ್ಕ ಮಾರಮ್ಮ ತಾಯಿ, ನಲ್ಡಿ ಮಾರಮ್ಮ ತಾಯಿ ದೇವರುಗಳಿಗೆ ಪೂಜಾ – ಕೈಂಕರ್ಯಗಳು ನಡೆದವು.

ಶಾಸಕ ವೆಂಕಟರಮಣಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿ ಗ್ರಾಮದಲ್ಲಿ ಸೇರಿದಂತೆ ಅಕ್ಕಪಕ್ಕದ ಊರುಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ನಾಡು ಸುಭಿಕ್ಷವಾಗಿರಲು ಕಾಲಕಾಲಕ್ಕೆ ದೇವರುಗಳ ಆರಾಧನೆ ಮಹತ್ವವಾಗಿದೆ ಎಂದರು.

ಕೆಎಂಎಫ್ ನಿರ್ದೇಶಕ ಬಿಸಿ ಆನಂದ್ ಕುಮಾರ್ ಗ್ರಾಮಸ್ಥರೊಂದಿಗೆ ಕುಟುಂಬ ಸಮೇತರಾಗಿ ಭಾಗವಹಿಸಿ ದೇವರುಗಳಿಗೆ ಉಡಿ ತುಂಬಿ, ಪೂಜೆ ಪುನಸ್ಕಾರ ನೆರವೇರಿಸಿದರು. ಕಳೆದ ವರ್ಷ ಉತ್ತಮ ಮಳೆಯಾಗಿ ರೈತರು ಉತ್ತಮ ಬೆಳೆ ಬೆಳೆದು ಸಮೃದ್ಧ ಜೀವನ ನಡೆಸುತ್ತಿದ್ದಾರೆ. ಮುಂದೆಯೂ ನಾಡಿಗೆ ಯಾವುದೇ ವ್ಯಾಧಿ ಭಾದಿಸದಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು ಎಂದರು.

ಇದೇ ವೇಳೆ ಸಾವಿರಾರು ಮಂದಿ ಭಕ್ತರು ಶಕ್ತಿ ದೇವತೆಗಳಿಗೆ ಉಡಿ ತುಂಬಿ ಪೂಜಾಕೈಂಕಕರ್ಯಗಳನ್ನು ನೆರವೇರಿಸಿದರು.

ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಲಕ್ಷ್ಮೀನಾರಾಯಣ್, ಎಪಿಎಂಸಿ ಮಾಜಿ ಅಧ್ಯಕ್ಷ ತಿ.ರಂಗರಾಜು ಸೇರಿದಂತೆ ಸಾವಿರಾರು ಮಂದಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *