‘ಪ್ರಜ್ವಲ್ ರೇವಣ್ಣ ಅವರ ಬಗ್ಗೆ ತಿಳಿದೂ ಬಿಜೆಪಿ ಪಕ್ಷ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡು‌ ಆರೋಪಿಯ ರಕ್ಷಣೆಗೆ ನಿಂತಿದೆ’- ಸಿಎಂ ಸಿದ್ದರಾಮಯ್ಯ

ಅಂತಾರಾಷ್ಟ್ರೀಯ ಪ್ರಯಾಣ ಮಾಡುವಾಗ ಎಲ್ಲರ ಪಾಸ್ ಪೋರ್ಟ್, ವೀಸಾ ಚೆಕ್ ಆಗುತ್ತದೆ. ಕೇಂದ್ರ ಸರ್ಕಾರಕ್ಕೆ ತಿಳಿಯದಂತೆ ಯಾರೂ ದೇಶದ ಹೊರಗೆ ಹೋಗಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರಜ್ವಲ್ ರೇವಣ್ಣ ದುಬೈ ಬಿಟ್ಟು ಇನ್ನು ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ. ಅವರು ದೇಶಕ್ಕೆ ಬರಲೇಬೇಕು. ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ನ್ನು ರದ್ದು ಮಾಡಲು ಪ್ರಧಾನಿಗಳಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.

ಪ್ರಜ್ವಲ್ ರೇವಣ್ಣ ಅವರ ಬಗ್ಗೆ ತಿಳಿದೂ ಬಿಜೆಪಿ ಪಕ್ಷ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ಪ್ರಜ್ವಲ್ ರೇವಣ್ಣ ಅವರ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಗೆ ರಕ್ಷಣೆ ನೀಡಲು ಸೂಚಿಸಿದ್ದೇನೆ. ವಿಪರ್ಯಾಸವೆಂದರೆ ಕೇಂದ್ರ ಸರ್ಕಾರ ಆರೋಪಿಯ ರಕ್ಷಣೆಗೆ ನಿಂತಿದೆ ಎಂದು ಹೇಳಿದ್ದಾರೆ.

ತಮಗೂ ರೇವಣ್ಣನ ಕುಟುಂಬಕ್ಕೂ ಸಂಬಂಧವಿಲ್ಲ ಎನ್ನುತ್ತಿದ್ದ ಕುಮಾರಸ್ವಾಮಿ ಹಾಗೂ ದೇವೇಗೌಡರು ತಮ್ಮ ಮನೆಗೆ ವಕೀಲರನ್ನು ಕರೆಸಿ ಚರ್ಚೆ ಮಾಡಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಹೋದಾಗ ನಾನು ಬೇರೆಯಲ್ಲ, ಪ್ರಜ್ವಲ್ ರೇವಣ್ಣ ಬೇರೆಯಲ್ಲ ಎಂದಿದ್ದರು. ರಾಜಕೀಯ ಹಾಗೂ ಪಾಪ ಕೃತ್ಯಗಳನ್ನು ಅವರೆಲ್ಲರೂ ಒಟ್ಟಿಗೆ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಕೊಲೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೊಲೆ ನಡೆದ ದಿನವೇ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣವನ್ನು ಸಿಐಡಿ ಗೆ ವಹಿಸಿ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಗುರಿಯಾಗಿಸಲು ಪ್ರಯತ್ನಿಸಲಾಗಿದೆ. ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸಲು ಒಂದು ಸರ್ಕಾರವಾಗಿ ನಾವು ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇವೆ ಎಂದರು.

ಸುಳ್ಳು ಸುಳ್ಳೇ ಲವ್ ಜಿಹಾದ್ ಎನ್ನುವ ಅಮಿತ್ ಶಾ ಮಣಿಪುರದಲ್ಲಿ ಏನು ಕ್ರಮ ಕೈಗೊಂಡಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.

Leave a Reply

Your email address will not be published. Required fields are marked *