ದ್ವೇಷದ ಕುಡುಗೋಲಿಗೆ ಬಲಿ‌ಯಾದ 50 ಕ್ಕೂ ಹೆಚ್ಚು ಅಡಿಕೆ ಗಿಡಗಳು: ಸಂಕಷ್ಟದಲ್ಲಿ ರೈತ ಕುಟುಂಬ

ರೈತ ತನ್ನ 29 ಗುಂಟೆ ಜಮೀನಿನಲ್ಲಿ‌ ಸಾಲ ಮಾಡಿ ಅಡಿಕೆ ಬೆಳೆ ಬೆಳೆದಿದ್ದ, ತನ್ನ ತೋಟಕ್ಕೆ ಓಡಾಡಲು ನಕಾಶೆ ರಸ್ತೆ ಇತ್ತು, ಆ ರಸ್ತೆಯನ್ನು ಬಿಡಲು ಅದೇ ಗ್ರಾಮದ ಒಂದು ಕುಟುಂಬ ಅಡ್ಡಗಾಲು ಹಾಕಿತ್ತು, ಆದರೆ ರೈತ ಪಟ್ಟುಬಿಡದೇ ಊರಿನ‌ ಗ್ರಾಮಸ್ಥರ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ರಸ್ತೆ ಮಾಡಿಸಿಕೊಂಡಿದ್ದ. ಇದಕ್ಕೆ ದ್ವೇಷ ಬೆಳೆಸಿಕೊಂಡಿದ್ದ ಆ ಕುಟುಂಬ ಸದಸ್ಯರೊಬ್ಬರು, ಏ.29ರ ಸಂಜೆ ಸುಮಾರು 7ಗಂಟೆ ಸಮಯದಲ್ಲಿ ಕುಡುಗೋಲಿನಲ್ಲಿ ಸುಮಾರು 50ಕ್ಕೂ ಹೆಚ್ಚು ಎರಡು ವರ್ಷದ ಅಡಿಕೆ ಸಸಿಗಳನ್ನು ಮನಸೋ ಇಚ್ಛೆ ಕತ್ತರಿಸಿ ಹಾಕಿರುವ ಘಟನೆ ತಾಲೂಕಿನ ಸಾಸಲು ಹೋಬಳಿಯ ಗಾಣದಾಳ ಗ್ರಾಮದಲ್ಲಿ ನಡೆದಿದೆ. 

50 ಕ್ಕೂ ಹೆಚ್ಚು ಗಿಡಗಳನ್ನು ಮಂಜುನಾಥ ಎಂಬಾತ ಕಡಿದು ಹಾಕಿದ್ದಾನೆ ಎಂದು ಸಂಕಷ್ಟಕ್ಕೀಡಾದ ರೈತ ಶಿವಶಂಕರ್ ಕುಟುಂಬಸ್ಥರು ಆರೋಪಿಸಿ, ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ವಿವರ

ಗಾಣದಾಳ ಗ್ರಾಮದ ಹಳ್ಳದ ಬಳಿ ರೈತ ಶಿವಶಂಕರ್ ಎಂಬುವರು ಸರ್ವೇ ನಂ. 8/1 ರಲ್ಲಿ 29 ಗುಂಟೆ ಜಮೀನನ್ನು ರಾಮಕ್ಕ‌ ಎಂಬುವರಿಂದ ಕ್ರಯ ಮಾಡಿಸಿಕೊಳ್ಳಲಾಗಿತ್ತು. ಜಮೀನು ಪಕ್ಕದಲ್ಲೇ ನಕಾಶೆ ದಾರಿ ವಿಚಾರವಾಗಿ ಮಂಜುನಾಥ ಹಾಗೂ ನಮ್ಮ ಕುಟುಂಬದ ಮಧ್ಯೆ ಜಗಳ ನಡೆದಿತ್ತು. ಆದರೂ, ನಕಾಶೆಯಲ್ಲಿದ್ದಂತೆ ಗ್ರಾ.ಪಂ ವತಿಯಿಂದ ರಸ್ತೆ ಮಾಡಿಸಿಕೊಂಡಿದ್ದೆವು. ಒಂದು ಕಿ.ಮೀ.ದೂರದಿಂದ ಪೈಪ್ ಲೈನ್ ಮೂಲಕ ನೀರು ತಂದು ಎರಡು ವರ್ಷದ ಹಿಂದೆ ಅಡಿಕೆ ಸಸಿಗಳನ್ನು ನಾಟಿ ಮಾಡಿದ್ದೆವು. ಹಳೆಯ ದ್ವೇಷ ಇಟ್ಟುಕೊಂಡು ಸೋಮವಾರ ಸಂಜೆ ಮಂಜುನಾಥ ಎಂಬಾತ ಅಡಿಕೆ ಗಿಡಗಳನ್ನು ಕಡಿದು ಹಾಕಿದ್ದಾನೆ ಎಂದು ಜಮೀನು ಮಾಲೀಕ ಶಿವಶಂಕರ್ ಆರೋಪಿಸಿದ್ದಾರೆ.

ಸೋಮವಾರ ಸಂಜೆ 7ಗಂಟೆ ಸುಮಾರಿಗೆ ಮಂಜುನಾಥ ನಮ್ಮ ಅಡಿಕೆ ತೋಟದ ಕಡೆಯಿಂದ ಕುಡುಗೋಲು ಹಿಡಿದು ಬರುತ್ತಿದ್ದ. ಮೇವಿಗೆ ಹೋಗಿ ಬರುತ್ತಿರಬಹುದು ಎಂದು ಸುಮ್ಮನಾದೆ. ಮಂಗಳವಾರ ಬೆಳಿಗ್ಗೆ 9 ಗಂಟೆ ಹೊತ್ತಿಗೆ ನೀರು ಹಾಯಿಸಲು ತೋಟದ ಕಡೆ ಬಂದು ನೋಡಿದಾಗ ಅಡಿಕೆ ಗಿಡಗಳನ್ನು ಕಡಿದು ಹಾಕಿರುವುದು ಬೆಳಕಿಗೆ ಬಂದಿದೆ. ಮಂಜುನಾಥನೇ ಅಡಿಕೆ ಗಿಡಗಳನ್ನು ಕಡಿದು ಹಾಕಿರಬಹುದು ಎಂಬ ಅನುಮಾನದ ಹಿನ್ನೆಲೆ ದೂರು ನೀಡಿದ್ದೇನೆ ಎಂದು ಶಿವಶಂಕರ್ ತಿಳಿಸಿದ್ದಾರೆ.

ನಂತರ ಶಿವಶಂಕರ್ ಅವರ ತಾಯಿ ನರಸಮ್ಮ ಮಾತನಾಡಿ, ವಡವೆ ಅಡವಿಟ್ಟು ಐದು ಲಕ್ಷ ಸಾಲ‌ ತಂದು ಅಡಿಕೆ ಬೆಳೆ ಬೆಳೆದಿದ್ದೆವು. ಮಂಜುನಾಥ, ನವೀನ ಅವರು ಸಣ್ಣ ಅಡಿಕೆ ಗಿಡಗಳನ್ನೇ ಕಡಿದು ನಾಶ ಮಾಡಿದ್ದಾರೆ. ನಮ್ಮ ಮಧ್ಯೆ ಏನೇ ಭಿನ್ನಾಭಿಪ್ರಾಯ ಇದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು. ಆದರೆ, ಜೀವನಕ್ಕೆ ಆಧಾರವಾಗಿದ್ದ ಅಡಿಕೆ ಸಸಿಗಳನ್ನೇ ಕತ್ತರಿಸಿ ಹಾಳು ಮಾಡಿದ್ದಾರೆ. ನಮಗೆ ನ್ಯಾಯದ ಜೊತೆ ರಕ್ಷಣೆ ಬೇಕು ಎಂದು ಅಳಲು ತೋಡಿಕೊಂಡರು.

ದೂರು, ಪ್ರತಿದೂರು ದಾಖಲು

ಅಡಿಕೆ ಸಸಿಗಳನ್ನು ಕಡಿದು ನಾಶ‌ ಮಾಡಿದ್ದಲ್ಲದೇ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದ ಆರೋಪದ ಮೇಲೆ ಮಂಜುನಾಥ, ನವೀನ್ ಕುಮಾರ್, ಜಯಮ್ಮ, ಮುತ್ತಯ್ಯ ಹಾಗೂ ಚಿನ್ನಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ.

ಮಂಜುನಾಥ ಅವರು ಕೂಡ ಪ್ರತಿದೂರು ನೀಡಿದ್ದು, ಮಾಂಗಲ್ಯ ಸರ ಕಿತ್ತುಹಾಕಿ ಹಲ್ಲೆ ನಡೆಸಿದ ಆರೋಪದಡಿ ಶಿವಶಂಕರ್, ನರಸಮ್ಮ ಇತರರ ವಿರುದ್ಧ ದೂರು ದಾಖಲಾಗಿದೆ.

ತಾಲೂಕಿನಲ್ಲಿ ಇತ್ತೀಚೆಗೆ ದ್ವೇಷ ತುಂಬಿದ ಮನಸ್ಥಿತಿಗಳು ಮಿತಿಮೀರಿದ್ದು, ಇದರಿಂದ ರಾಗಿ ಹುಲ್ಲಿನ ಬಣವೆಗೆ ಬೆಂಕಿ ಹಚ್ಚುವುದು, ಬೆಳೆ ನಾಶ ಮಾಡುವುದು, ಬೋರ್ ವೆಲೆ ಪೈಪ್, ಕೇಬಲ್ ತುಂಡರಿಸುವುದು, ರೇಷ್ಮೇ ಗೂಡಿಗೆ ಬೆಂಕಿ ಹಚ್ಚಲಾಗುತ್ತಿದೆ. ಇಂತಹ ಕೃತ್ಯಗಳಲ್ಲಿ ಭಾಗಿಯಾಗುವ ರೋಗಗ್ರಸ್ತ ಮನಸ್ಥಿತಿ ಇರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *