ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಶ್ರೀನಿವಾಸ ಪ್ರಸಾದ್(76) ನಿಧನ

ಕೇಂದ್ರ ಹಾಗು ರಾಜ್ಯ ಸಚಿವರಾಗಿ, ಆರು ಬಾರಿ ಸಂಸದರಾಗಿ, ಎರಡು ಬಾರಿ ಶಾಸಕರಾಗಿ ಸುಮಾರು ಐದು ದಶಕಗಳ ಸುದೀರ್ಘ ಸಾರ್ವಜನಿಕ ಜೀವನ ನಡೆಸಿದ 76 ವರ್ಷದ ಶ್ರೀನಿವಾಸ್ ಪ್ರಸಾದ್ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಉಸಿರಾಟ ಸಮಸ್ಯೆ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸಂಸದರು ಕಳೆದ ಕೆಲ ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಇಂದು ಅಗಲಿದ್ದಾರೆ.

ಶ್ರೀನಿವಾಸ ಪ್ರಸಾದ್ ಅವರ ಅಗಲಿಕೆಗೆ ಹಿರಿಯ ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ.

ಕೇಂದ್ರದ ಮಾಜಿ ಸಚಿವರು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರು, ಹಿರಿಯ ಮುತ್ಸದ್ದಿಗಳಾದ ಶ್ರೀ ವಿ ಶ್ರೀನಿವಾಸ್ ಪ್ರಸಾದ್ ಅವರು ಅನಾರೋಗ್ಯದಿಂದ ನಿಧನರಾದ ಸುದ್ದಿ ಅತೀವ ದುಃಖ ತರಿಸಿದೆ. ಅವರ ಅಗಲಿಕೆಯಿಂದ ದಕ್ಷಿಣ ಕರ್ನಾಟಕದ ದಲಿತ ಸೂರ್ಯ ಮುಳುಗಿದಂತಾಗಿದೆ. ಅವರ ರಾಜಕೀಯ ಜೀವನದ ಕಡೇ ದಿನಗಳಲ್ಲಿ ಬಿಜೆಪಿಯನ್ನು ಆಯ್ದುಕೊಂಡು ಸಂಸದರಾಗಿ ಪಕ್ಷದ ತತ್ವ, ಸಿದ್ದಾಂತ ಹಾಗೂ ರಾಷ್ಟ್ರೀಯವಾದದ ಸತ್ವವನ್ನು ಜನರಿಗೆ ತಿಳಿಸುವಲ್ಲಿ ನಾಯಕತ್ವ ವಹಿಸಿದ್ದು ಬಿಜೆಪಿಯ ಸಾಮಾಜಿಕ ನ್ಯಾಯ ಹಾಗೂ ಸಂವಿಧಾನ ಮೌಲ್ಯವನ್ನು ಎತ್ತಿ ಹಿಡಿಯುವ ಬದ್ಧತೆಯನ್ನು ಸಾಕ್ಷೀಕರಿಸಿತ್ತು.

ಪ್ರಸ್ತುತ ಕಾಲಮಾನದಲ್ಲಿ ಮಾನ್ಯ ಪ್ರಸಾದರ ಅನುಪಸ್ಥಿತಿ ರಾಷ್ಟ್ರರಾಜಕಾರಣದಲ್ಲೂ ಕೊರತೆ ಸೃಷ್ಟಿಸಿದಂತಾಗಿದೆ. ಅವರ ಅಗಲಿಕೆಯ ನೋವನ್ನು ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *