ಕೋಲಾರ: ತಾಲ್ಲೂಕಿನ ಬೆಗ್ಲಿಬೆಣಜೇನಹಳ್ಳಿ ಗ್ರಾಮದಲ್ಲಿರುವ ಎಂಎಸ್ಐಎಲ್ ಮದ್ಯದಂಗಡಿಯನ್ನು ಮುಚ್ಚಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಗ್ರಾಮದ ಪ್ರವೇಶ ದ್ವಾರದಲ್ಲೇ ಮದ್ಯದಂಗಡಿ ನಿರ್ಮಿಸಿದ್ದು, ಊರಿನ ಯುವಕರು ಕುಡಿದು ಬರುತ್ತಾರೆ. ವಿದ್ಯಾರ್ಥಿಗಳು, ಮಹಿಳೆಯರು ಆ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ ಮಹಿಳೆಯರು, ವಯೋವೃದ್ಧರು ನ್ಯಾಯಬೇಕು ಎಂದು ಆಗ್ರಹಿಸಿ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಗ್ರಾಮದಲ್ಲಿರುವ ಮದ್ಯದಂಗಡಿ ಮುಚ್ಚಿಸುವವರೆಗೆ ನಾವು ಮತದಾನ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ಥಳಕ್ಕೆ ಬಂದು ಕೂಡಲೇ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಕೋಲಾರ ಗ್ರಾಮಾಂತರ ಇನ್ ಸ್ಪೆಕ್ಟರ್ ಕಾಂತರಾಜ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಂದು ಪ್ರತಿಭಟನಕಾರರನ್ನು ಚದುರಿಸಿದರು.
ಮೊದಲು ಮತ ಹಾಕುವಂತೆ ಅಧಿಕಾರಿಗಳು ಮನವಿ ಮಾಡಿದರು. ಮಧ್ಯಾಹ್ನದವರೆಗೆ ಮತದಾನ ಮಾಡಿರಲಿಲ್ಲ ಬಳಿಕ ಸಂಸದ ಎಸ್. ಮುನಿಸ್ವಾಮಿ ಎಂಎಲ್ಸಿ ಇಂಚರ ಗೋವಿಂದರಾಜು, ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು, ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಹಾಗೂ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮನವಿ ಆಲಿಸಿದರು.
ಚುನಾವಣೆ ಮುಗಿದ ನಂತರ ಅತಿ ಶೀಘ್ರದಲ್ಲಿ ಮಧ್ಯದ ಅಂಗಡಿಯನ್ನು ತೆರವುಗೊಳಿಸುವುದಾಗಿ ಗ್ರಾಮಸ್ಥರಿಗೆ ಸಂಸದರು ಭರವಸೆ ನೀಡಿದರು. ಕ್ರಮದ ಬಗ್ಗೆ ಭರವಸೆ ನೀಡಿ ಮನವೊಲಿಸಿದ ಮೇಲೆ ಮತಗಟ್ಟೆಗೆ ತೆರಳಿ ಮತದಾರರು ತಮ್ಮ ಹಕ್ಕು ಚಲಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕೃಷ್ಣಮ್ಮ, ಚಂದ್ರೇಗೌಡ, ಚನ್ನಪ್ಪ, ಮುನಿಯಪ್ಪ, ಬಿ.ಆರ್.ಮಂಜುನಾಥ್, ಅವಿನಾಶ್, ವಿಶ್ವನಾಥ್, ರಘು, ಅರುಣ್ ಕುಮಾರ್, ಶಿವರಾಜ್, ರಾಘವೇಂದ್ರ, ಮುಂತಾದವರು ಇದ್ದರು