ಕನ್ನಡ ನಾಡು, ನುಡಿ, ಜಲ ಉಳಿವಿಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕನ್ನಡ ಪಕ್ಷ ಬೆಂಬಲ ನೀಡಲಾಗುತ್ತಿದೆ. ಚುನಾವಣೆಯೂ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ನಡೆಯಬೇಕು. ಆದರೆ, ಪ್ರಸ್ತುತ ಧರ್ಮಗಳ ಆಧಾರದ ಮೇರೆಗೆ ಮೋದಿ ಚುನಾವಣೆ ನಡೆಸಲು ಮುಂದಾಗಿದ್ದಾರೆ. ಈ ಹಿನ್ನೆಲೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಪಕ್ಷಗಳಿಗೆ ಬೆಂಬಲವಿಲ್ಲ ಎಂದು ಕನ್ನಡ ಜಾಗೃತ ಪರಿಷತ್ ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ ಹೇಳಿದರು.
ನಗರದ ಕೋರ್ಟ್ ಮುಂಭಾಗದಲ್ಲಿರುವ ಕನ್ನಡ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹತ್ತು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಪ್ರಧಾನಿ ಮೋದಿಯ ಆಶ್ವಾಸನೆಗಳು ಕೇವಲ ಚುನಾವಣಾ ಗಿಮಿಕ್ಗಳಾಗಿಯೇ ಉಳಿದು ಕೊಂಡಿದೆ. ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ದೆಹಲಿಯಲ್ಲಿ ರೈತರ ಪ್ರತಿಭಟನೆಯನ್ನು ತಡೆಯಲು ಹಿಂಸೆಯ ಮೂಲಕ ಸಾಕಷ್ಟು ನೋವನ್ನು ರೈತರಿಗೆ ನೀಡಲಾಗಿದೆ. ಮಣಿಪುರದಲ್ಲಿ ಮಹಿಳೆಯರ ಹತ್ಯಾಚಾರದಿಂದಾಗಿ ಇಡೀ ರಾಜ್ಯವೇ ಬೆಚ್ಚುಬಿದ್ದಿದೆ. ಇಷ್ಟೆಲ್ಲಾ ನಡೆದರೂ ಪ್ರಧಾನಿ ಮೋದಿಯವರು ಒಂದು ಮಾತು ಆಡದೇ ಮೌನಕ್ಕೆ ಶರಣಾಗಿದ್ದಾರೆ ಎಂದು ಪ್ರಧಾನಿ ವಿರುದ್ಧ ಕಿಡಿಕಾರಿದರು.
ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಆ ಸಮಸ್ಯೆಗಳನ್ನು ಪ್ರಧಾನಿ ಹಾಗೂ ಸಂಬಂಧಪಟ್ಟ ಸಚಿವರ ಬಳಿ ಹೇಳಿ ಪರಿಹಾರ ಒದಗಿಸುವಲ್ಲಿ ರಾಜ್ಯದ ಸಂಸದರು ವಿಫಲರಾಗಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ದಬ್ಬಾಳಿಕೆ, ಸಂವಿಧಾನಸ ಮೇಲೆ ದಾಳಿ ನಡೆಯುತ್ತಿದೆ. ಇದರ ವಿರುದ್ಧ ಏನಾದರೂ ಮಾತನಾಡಿದರೆ ದೇಶ ದ್ರೋಹಿಗಳೆಂದು ಪಟ್ಟ ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಪಕ್ಷದ ಆಡಳಿತ ವೈಖರಿ ಬಗ್ಗೆ ಟೀಕಿಸಿದರೆ ಐಟಿ, ಇಡಿ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಕನ್ನಡ ಪರ ಹಿರಿಯ ಹೋರಾಟಗಾರ ಸಂಜೀವ್ ನಾಯಕ ಮಾತನಾಡಿ, ಕನ್ನಡ ಪಕ್ಷದ ಸಿದ್ಧಾಂತ, ಬಿಜೆಪಿ ಪಕ್ಷದ ಸಿದ್ಧಾಂತ ಬೇರೆಬೇರೆ, ಆದ್ದರಿಂದ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಸುತ್ತೇವೆ. ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಕುಟುಂಬ ರಾಜಕಾರಣದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಈ ದೇಶದ ಇತಿಹಾಸದಲ್ಲಿ ಬಡತನ ನಿರುದ್ಯೋಗದಂತಹ ಜ್ವಲಂತ ಸಮಸ್ಯೆಗಳು ದಾಖಲೆಯತ್ತ ಸಾಗುತ್ತಿದೆ. ಇದನ್ನು ನಿಯಂತ್ರಿಸುವ ಬದಲು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಭಾವನೆಗಳ ಮೇಲೆ ಚುನಾವಣೆ ನಡೆಸುತ್ತಿದ್ದಾರೆ ಹೇಳಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು ಕೋವಿಡ್ ಸಮಯದಲ್ಲಿ ಜನರ ಹಣ ಲಪಟಾಯಿಸಿದ್ದಾರೆ. ಮಾಸ್ಕ್ ನಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಮೊದಲು ಜೆಡಿಎಸ್ ಪಕ್ಷಕ್ಕೆ ಕನ್ನಡ ಪಕ್ಷದ ಬೆಂಬಲವಿತ್ತು, ಈಗ ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ನಮ್ಮ ಬೆಂಬಲವನ್ನ ವಾಪಸ್ ಪಡೆದು ಕಾಂಗ್ರೆಸ್ ಪಕ್ಷಕ್ಕೆ ನೀಡಲಾಗುತ್ತಿದೆ ಎಂದರು.
ಈ ವೇಳೆ ಕನ್ನಡ ಪಕ್ಷದ ತಾಲೂಕು ಅಧ್ಯಕ್ಷ ವೆಂಕಟೇಶ್, ಕನ್ನಡ ಪಕ್ಷದ ಬೆಂ.ಗ್ರಾ ಜಿಲ್ಲಾ ಕಾರ್ಯದರ್ಶಿ ಮುನಿಪಾಪಯ್ಯ ಸೇರಿದಂತೆ ಕನ್ನಡ ಪಕ್ಷದ ಪದಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.