ಸಂವಿಧಾನದತ್ತವಾದ ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸಿ-ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಸಂವಿಧಾನದತ್ತವಾದ ಮತದಾನದ ಹಕ್ಕನ್ನು ತಪ್ಪದೇ ಪ್ರತಿಯೊಬ್ಬರೂ ಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಹೇಳಿದರು.

ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ಮತದಾನದ ಅರಿವು ಮೂಡಿಸುವ ಉದ್ದೇಶದಿಂದ ವಾಲಿಬಾಲ್ ಪಂದ್ಯಾವಳಿಯ ಚಾಲನೆ ನೀಡಿ ಅವರು ಮಾತನಾಡಿ. ಏಪ್ರಿಲ್ 26 ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಮತದಾನದಲ್ಲಿ ಮತದಾರರು ಹಣದ ಆಮಿಷ, ಜಾತಿ ಧರ್ಮಕ್ಕೆ ಕಟ್ಟುಬೀಳದೆ ಯೋಗ್ಯ ಅಭ್ಯರ್ಥಿಗೆ ನೈತಿಕವಾಗಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು ಎಂದು ಹೇಳಿದರು.

ಜಿಪಂ ಸಿಇಒ ಅನುರಾಧ ಮಾತನಾಡಿ, ದೇಶವನ್ನು ಸದೃಢವಾಗಿ ಕಟ್ಟುವ ಸಲುವಾಗಿ 18 ವರ್ಷ ತುಂಬಿದ ಪ್ರತಿಯೊಬ್ಬ ನಾಗರಿಕನು ಮತದಾನ ಮಾಡುವ ಮೂಲಕ ಸಮಾಜವನ್ನು ಕಟ್ಟಬೇಕು ಎಂದರು ಯುವ ಮತದಾರರನ್ನು ಮತದಾನದತ್ತ ಸೆಳೆಯುವ ಸಲುವಾಗಿ ಜಾಗೃತಿ ಮೂಡಿಸಲು ಈ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ ಎಂದರು.

ಯುವ ಮತದಾರರ ತಾವು ಕಡ್ಡಾಯವಾಗಿ ಮತದಾನ ಮಾಡುವುದಲ್ಲದೆ, ತಮ್ಮ ಮನೆಯಲ್ಲಿರುವ ಕುಟುಂಬದ ಸದಸ್ಯರನ್ನು ತಪ್ಪದೇ ಮತದಾನ ಮಾಡುವಂತೆ ಪ್ರೇರೆಪಿಸಿ ಎಂದು ಯುವಕರಲ್ಲಿ ಜಾಗೃತಿ ಮೂಡಿಸಿ, ಸ್ಪರ್ಧಾಳುಗಳಿಗೆ ಮತ್ತು ಸಾರ್ವಜನಿಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ತಾ.ಪಂ ಇಒ ಮುನಿರಾಜು ಮಾತನಾಡಿ, ಯುವಕರು ದೈಹಿಕವಾಗಿ ಸದೃಢರಾಗಲು ಕ್ರೀಡೆ ಸಹಕಾರಿಯಾಗಲಿದೆ ಅದೇ ರೀತಿಯಾಗಿ ದೇಶವನ್ನು ಕಟ್ಟಲು ಯುವಕರು ತಪ್ಪದೇ ಮತದಾನ ಮಾಡಬೇಕಿದೆ. ಈ ನಿಟ್ಟಿನಲ್ಲಿ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಒಟ್ಟು 28 ತಂಡಗಳು ಭಾಗವಹಿಸಿದ್ದು ವಿಜೇತ ತಂಡಕ್ಕೆ 10 ಸಾವಿರ ಪ್ರೋತ್ಸಾಹ ಬಹುಮಾನವನ್ನು ನೀಡಲಾಗುತ್ತಿದೆ‌ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ತಮ್ಮ ಮತವನ್ನು ಚಲಾಯಿಸಿ. ಹಾಗೂ ದೇಶ ಪ್ರಗತಿಗೆ ಪ್ರತಿಯೊಬ್ಬರು ಸಹಕರಿಸಿ ಎಂದರು.

ಈ ವೇಳೆ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ವಿದ್ಯಾ ವಿಭಾ ರಾಥೋಡ್, ನಗರಸಭೆ ಪೌರಾಯುಕ್ತ ಪರಮೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾ.ಪಂ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *