ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ಯಾಮಾರಿಸಿದ್ದೇ ಬಿಜೆಪಿ ಸರಕಾರದ ಸಾಧನೆ: ಡಾ.ಎಂ.ಸಿ ಸುಧಾಕರ್

ಕೋಲಾರ: ದೇಶದ ಜನರನ್ನು ಕಳೆದ ಹತ್ತು ವರ್ಷಗಳಿಂದ ಬಿಜೆಪಿ‌ ನೇತೃತ್ವದ ಕೇಂದ್ರ ಸರ್ಕಾರ ಯಾಮಾರಿಸಿಕೊಂಡು ಬಂದಿದ್ದೇ ಅವರ ಸಾಧನೆ ಅಂತವರಿಗೆ ಯಾವುದೇ ಕಾರಣಕ್ಕೂ ಮತ ಹಾಕಬೇಡಿ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ತಿಳಿಸಿದರು.

ತಾಲ್ಲೂಕಿನ ವೇಮಗಲ್ ಹೋಬಳಿಯ ಚೌಡದೇನಹಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ಮಾಜಿ ಕೃಷಿ ಸಚಿವ ದಿವಂಗತ ಸಿ.ಬೈರೇಗೌಡ ಅವರ ಸಮಾಧಿಗೆ ಭೇಟಿ ನೀಡಿ ವೇಮಗಲ್ ಪಟ್ಟಣದಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಕೆವಿ ಗೌತಮ್ ಪರ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಕೇವಲ ರಾಜಕೀಯ ಅಧಿಕಾರಕ್ಕಾಗಿ ಸುಳ್ಳು ಭರವಸೆಗಳನ್ನು ನೀಡಿ ಹತ್ತು ವರ್ಷ ಅಧಿಕಾರ ಅನುಭವಿಸಿದೆ ದಿನನಿತ್ಯ ವಸ್ತುಗಳ ಬೆಲೆಏರಿಕೆ ಪೆಟ್ರೋಲ್ ಡಿಸೇಲ್ ಬೆಲೆಯನ್ನು ಏರಿಕೆ ಮಾಡಿದ್ದು ಅಲ್ಲದೇ ದೇಶವನ್ನು ದಿವಾಳಿ ಮಾಡಿ ಭಾವನಾತ್ಮಕ ವಿಚಾರಗಳ ಬಗ್ಗೆ ಭಾಷಣಗಳನ್ನು ಮಾಡಿ ಯಾಮಾರಿಸಿದ್ದಾರೆ ಎಂದರು.

ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು ದೆಹಲಿಯಲ್ಲಿ ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ರೈತರ ಹಿತ ಕಾಯುವ ಕೆಲಸ ಮಾಡುವುದನ್ನು ಬಿಟ್ಟು ಅವರ ಮೇಲೆ ಪೋಲೀಸರಿಂದ ಹಲ್ಲೆ ಮಾಡಿ ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಮಾಡಿದ್ದಾರೆ ಕೇವಲ ರಾಜಕೀಯ ಅಧಿಕಾರಕ್ಕಾಗಿ ಜನರಲ್ಲಿ ಕೋಮು ಭಾವನೆಗಳನ್ನು ಮುಂದಿಟ್ಟುಕೊಂಡು ಕೋಮುಗಲಭೆ ಸೃಷ್ಟಿಸಿ ಅಧಿಕಾರ ಪಡೆದ ಬಿಜೆಪಿಗೆ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲಿಲ್ಲ ಆದರೆ ಕಾಂಗ್ರೆಸ್ ನೀಡಿದ್ದ ಭರವಸೆಗಳನ್ನು ಅಧಿಕಾರಕ್ಕೆ ಬಂದ ಕೂಡಲೇ ಕೇವಲ ಎಂಟು ತಿಂಗಳಲ್ಲಿ ೫ ಗ್ಯಾರೆಂಟಿಗಳನ್ನು ಈಡೇರಿಸಿದ್ದೇವೆ, ಪ್ರತಿಯೊಬ್ಬರು ಮನೆ ಮನೆಗೂ ಹೋಗಿ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅಭಿವೃದ್ದಿ ಯೋಜನೆಗಳ ಕುರಿತು ಮನವರಿಕೆ ಮಾಡಿಕೊಟ್ಡು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿ ಎಂದು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ಮನೆ ಮನೆಗೆ ಗ್ಯಾರಂಟಿ ಯೋಜನೆಯ ಕಾರ್ಡುಗಳನ್ನು ವಿತರಣೆ ಮಾಡಿದ್ದೇವೆ ಅದರಂತೆ 5 ಗ್ಯಾರಂಟಿ ಯೋಜನೆ ಅನುಷ್ಠಾನ ಗೊಳಿಸಲಾಗಿದೆ, ಅದರಂತೆ ಲೋಕಸಭಾ ಚುನಾವಣೆಗೆ ೨೫ ಗ್ಯಾರೆಂಟಿ ಕಾರ್ಡುಗಳಿಗೆ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಸಹಿ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಅಷ್ಟು ಗ್ಯಾರೆಂಟಿಗಳನ್ನು ಜಾರಿ ಮಾಡುತ್ತೇವೆ ಹಾಗಾಗಿ ಪ್ರತಿಯೊಬ್ಬರು ಕಾಂಗ್ರೇಸ್ ಪಕ್ಷಕ್ಕೆ ಮತ ನೀಡುವ ಮೂಲಕ ಅಭ್ಯರ್ಥಿ ಕೆ.ವಿ ಗೌತಮ್ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ದೇಶದಲ್ಲಿ‌ ಬಿಜೆಪಿ‌ ಅಧಿಕಾರಕ್ಕೆ ಬಂದ ನಂತರ ಬಡವರು ಬೀದಿಗೆ ತಳ್ಳಿ ಶ್ರೀಮಂತರಿಗೆ ಆದ್ಯತೆ ನೀಡಿದ್ದಾರೆ. ದೇಶದಲ್ಲಿನ ಬಿಜೆಪಿ ಸರಕಾರವನ್ನು ಅಧಿಕಾರದಿಂದ ದೂರವಿಟ್ಟು ಬಡವರ ಪರವಾದ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವ ಸಮಯ ಬಂದಿದೆ, ಬಿಜೆಪಿ‌ ಸರ್ಕಾರವನ್ನು ದೇಶದಿಂದ ತೊಲಗಿಸಿದರೇ ಮಾತ್ರ ಸಾಮಾನ್ಯ ಜನರಿಗೂ ಅಚ್ಚೇ ದಿನ್ ಬರುತ್ತೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ ಗೌತಮ್ ಮಾತನಾಡಿ ಕಳೆದ 10 ವರ್ಷದಲ್ಲಿ‌ ದೇಶವನ್ನು ಕತ್ತಲೆಯ ಕೂಪಕ್ಕೆ ಬಿಜೆಪಿಯವರು ನೂಕಿದ್ದಾರೆ ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು ದೇಶದ ಭವಿಷ್ಯವನ್ನು ರೂಪಿಸಿಕೊಳ್ಳಲು ಇದೊಂದು ಸುವರ್ಣವಕಾಶ ಹಾಗಾಗಿ ಪ್ರತಿಯೊಬ್ಬರು ಕಾಂಗ್ರೇಸ್ ಸರ್ಕಾರದ 5 ಗ್ಯಾರೆಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುವ ಮೂಲಕ ಗೆಲ್ಲಿಸಿ, ನಾನು ನಿಮ್ಮ ಮನೆ ಮಗನಂತೆ ನಿಮ್ಮ ಸೇವೆ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎಂಎಲ್ಸಿ ಎಂ. ಎಲ್ ಅನಿಲ್ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ್, ಮಾಜಿ ಸಭಾಪತಿ ವಿ.ಆರ್ ಸುದರ್ಶನ್, ಮುಖಂಡರಾದ ನಾಗನಾಳ ಸೋಮಣ್ಣ,ಮುನಿಅಂಜಪ್ಪ, ವಕ್ಕಲೇರಿ ರಾಜಪ್ಪ, ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಕೆ.ವಿ ದಯಾನಂದ್, ಚಂಜಿಮಲೆ ರಮೇಶ್, ಮೈಲಾಂಡಹಳ್ಳಿ ಮುರಳಿ, ಮುನಿಯಪ್ಪ ಮುಂತಾದವರು ಇದ್ದರು

Leave a Reply

Your email address will not be published. Required fields are marked *