ಕರಡಿ ದೇಹದ ಭಾಗಗಳನ್ನು ಸೇವಿಸುವುದರಿಂದ ಶಕ್ತಿ ಹೆಚ್ಚುತ್ತದೆ ಎಂದು ಜನರನ್ನ ನಂಬಿಸಿ ಮಾರಾಟಕ್ಕೆ ಯತ್ನ: ನಾಲ್ವರ‌ ಬಂಧನ

ಕರಡಿಗೆ ವಿದ್ಯುತ್ ಸ್ಪರ್ಶಿಸಿ ಅದರ ಭಾಗಗಳನ್ನು ಹೊಂದಿದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಆತ್ಮಕೂರು ಅರಣ್ಯ ವಿಭಾಗದ ಅರಣ್ಯಾಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಎನ್ ಯೇಸುರತ್ನಂ, ಎಂ ಶಿಕಾಮಣಿ, ವಿ ಮನು ಸದ್ಗುಣರಾವ್ ಮತ್ತು ಎನ್ ಸಾಯಿಕುಮಾರ್ ಬಂಧಿತ ಆರೋಪಿಗಳು. ಆರೋಪಿಗಳೆಲ್ಲರೂ ನಂದ್ಯಾಲ ಜಿಲ್ಲೆಯ ಕೊತ್ತಪಲ್ಲಿ ಮಂಡಲಕ್ಕೆ ಸೇರಿದವರು ಎನ್ನಲಾಗಿದೆ.

ಶುಕ್ರವಾರ ಮುಂಜಾನೆ ಖಚಿತ ಮಾಹಿತಿ ಆಧಾರದ ಮೇಲೆ ಇಬ್ಬರು ಆರೋಪಿಗಳಾದ ಶಿಕಾಮಣಿ ಮತ್ತು ರಾವ್ ಅವರನ್ನು ಆತ್ಮಕೂರಿನ ಸೂರ್ಯ ಗಾರ್ಡನ್ ಲಾಡ್ಜ್ ಬಳಿ ಬಂಧಿಸಲಾಗಿದ್ದು, ಬಂಧಿತರಿಂದ ಕರಡಿಯ ಒಣಗಿದ ಜನನಾಂಗ, ತಲೆ, ಪಾದ ಮೂಳೆಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲ್ಲದೆ, ಕರಡಿಯ ದೇಹದ ಭಾಗಗಳನ್ನು ಮಾರಾಟ ಮಾಡುವಲ್ಲಿ ಭಾಗಿಯಾಗಿದ್ದ ಎನ್ನಲಾದ ಯೇಸುರತ್ನಂ ಮತ್ತು ಕುಮಾರ್ ಅವರನ್ನು ಗುರುವಾರ ರಾತ್ರಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಅರಣ್ಯಾಧಿಕಾರಿಗಳ ಪ್ರಕಾರ, ಕೊತ್ತಪಲ್ಲಿ ಮಂಡಲದ ಶಿವಪುರಂ ಗ್ರಾಮದ ಕೃಷಿ ಕ್ಷೇತ್ರದಲ್ಲಿ ಆರೋಪಿಗಳು 10 ದಿನಗಳ ಹಿಂದೆ ವಿದ್ಯುತ್ ಸ್ಪರ್ಶಿಸಿ ಕರಡಿಯನ್ನು ಕೊಂದಿದ್ದು, ಅದರ ಭಾಗಗಳನ್ನು ಕಾಮೋತ್ತೇಜಕವಾಗಿ ಬಳಸಿಕೊಳ್ಳುವ ಉದ್ದೇಶವಿತ್ತು ಎಂಬ ಮಾಹಿತಿ ತಿಳಿದುಬಂದಿದೆ.

ನಾಲ್ವರು ಆರೋಪಿಗಳನ್ನು ಶನಿವಾರ ಆತ್ಮಕೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕರಡಿ ದೇಹದ ಭಾಗಗಳನ್ನು ಸೇವಿಸುವುದರಿಂದ ಶಕ್ತಿ ಹೆಚ್ಚುತ್ತದೆ ಎಂಬ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಕಾಡು ಪ್ರಾಣಿಗಳನ್ನು ಬೇಟೆಯಾಡುವುದು ಗಂಭೀರ ಅಪರಾಧ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *