ಹಳ್ಳಿಯ ಸೊಗಡನ್ನು ನವಪೀಳಿಗೆಗೆ ಪರಿಚಯಿಸಿದ ನ್ಯಾಷನಲ್ ಪ್ರೈಡ್ ಶಾಲೆ

ದೊಡ್ಡಬಳ್ಳಾಪುರ: ಆಧುನಿಕತೆಯ ಸೋಗಿನಲ್ಲಿ ಹಳ್ಳಿಯ ಸೊಗಡು ಮಾಯವಾಗುತ್ತಿದೆ. ಗ್ರಾಮೀಣರ ಬದುಕು, ಪ್ರಾಣಿ-ಪಕ್ಷಿಯೊಂದಿಗಿನ ಅನೋನ್ಯತೆ, ಜನರ ಸಂಸ್ಕೃತಿ- ಸಂಪ್ರದಾಯ, ಆಚಾರ-ವಿಚಾರಗಳು ಇಂದಿನ ನವಪೀಳಿಗೆಗೆ ಅಪಥ್ಯೆ ಎನಿಸಿವೆ. ಆದರೆ, ಹಳ್ಳಿಯ ಸೊಗಡನ್ನು ಪರಿಚಯಿಸುವ ವಿನೂತನ ಕಾರ್ಯಕ್ರಮಕ್ಕೆ ನ್ಯಾಷನಲ್ ಪ್ರೈಡ್ ಶಾಲೆ ಸಾಕ್ಷಿಯಾಯಿತು.

ಹೌದು, ನಗರದ ಕೊಂಗಾಡಿಯಪ್ಪ ಕಾಲೇಜು ರಸ್ತೆಯಲ್ಲಿರುವ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಆಯೋಜಿಸಿದ್ದ ಫಾರ್ಮ್ ಪಾರ್ಟಿ ಮಕ್ಕಳಿಗೆ ವಿನೂತನ ಅನುಭೂತಿ‌ ನೀಡಿತು.

ಹಸು, ಮೇಕೆ, ಕುರಿ, ಕೋಳಿ, ಕತ್ತೆ, ಕುದುರೆ, ಮೊಲ, ಟರ್ಕಿ‌ ಕೋಳಿ, ಹಂದಿ ಹಾಗೂ ವಿವಿಧ ತಳಿಯ ಶ್ವಾನಗಳನ್ನು ಪ್ರದರ್ಶಿಸಿ, ಪರಿಚಯಿಸಲಾಯಿತು. ಪುಟಾಣಿ ಮಕ್ಕಳು ಪ್ರಾಣಿ ಪಕ್ಷಿಗಳನ್ನು ನೇರವಾಗಿ ನೋಡಿ ತುಂಟ ನಗೆಯೊಂದಿಗೆ ಅವುಗಳ ಜೊತೆ ಪೋಟೋಗೆ ಪೋಸ್ ನೀಡಿದರು. ಮಕ್ಕಳು ಕುದುರೆ ಸವಾರಿ ಮಾಡಿ ಮೋಜು ಅನುಭವಿಸಿದರು. ಇದಲ್ಲದೇ ರೇಷ್ಮೆ ಹುಳುವಿನ ಜೀವನ ಚಕ್ರದ ವಿವಿಧ ಮಜಲುಗಳನ್ನು ನೇರವಾಗಿ ತೋರಿಸಲಾಯಿತು.

ಶಾಲೆಯ ಒಳಾವರಣದಲ್ಲಿ ಮಕ್ಕಳು ಹಾಗೂ ಪೋಷಕರಿಗಾಗಿ ವಿವಿಧ ಆಟಗಳು, ಮ್ಯಾಜಿಕ್ ಶೋ, ಟ್ಯಾಟೂ, ಪುಟಾಣಿ ಮಕ್ಕಳ ರ‌್ಯಾಂಪ್‌ವಾಕ್ ಮುದ‌ ನೀಡಿತು. ಮಕ್ಕಳ ಜೊತೆ ಪೋಷಕರೂ ಕೂಡ ಮಕ್ಕಳಾಗಿ ಮನರಂಜನೆ ಅನುಭವಿಸಿದರು.

ಶಾಲೆಯ ಕಾರ್ಯದರ್ಶಿ ಸತೀಶ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಪ್ರತಿ ವರ್ಷವೂ ನ್ಯಾಷನಲ್ ಫ್ರೈಡ್ ಶಾಲೆಯಲ್ಲಿ ವಿನೂತನ, ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ದೊಡ್ಡಬಳ್ಳಾಪುರದಲ್ಲಿ ಇದೇ ಮೊದಲಿಗೆ ಮಕ್ಕಳಿಗೆ ಮನರಂಜನೆ ಜೊತೆಗೆ ವಿವಿಧ ಸಾಕುಪ್ರಾಣಿಗಳನ್ನು ನೇರವಾಗಿ ನೋಡಿ ಆನಂದಿಸುವ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಶಾಲೆಯಲ್ಲಿ ಎಲ್ಲ ಮಕ್ಕಳಿಗೆ ಹನುಮಾನ್ ಚಾಲಿಸಾ, ಭಗವದ್ಗೀತೆ, ಬೈಬಲ್ ಸ್ತೋತ್ರ ಹಾಗೂ ಧುವ ಹೇಳಿಕೊಡಲಾಗುತ್ತಿದೆ. ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ಜೊತೆಗೆ ಗುಣಮಟ್ಟದ ಶಿಕ್ಷಣ ಒದಗಿಸಲಾಗುತ್ತಿದೆ. ಪ್ರಪ್ರಥಮ ಬಾರಿಗೆ ನ್ಯಾಷನಲ್ ಪ್ರೈಡ್  ಶಾಲೆಯಲ್ಲಿ 3ಡಿ ಅನಿಮೇಶನ್ ಯಂತ್ರವನ್ನು ಕಲಿಕೆಗೆ ಅಳವಡಿಸಿ ಕಲಿಸಲಾಗುತ್ತಿದೆ ಎಂದು ವಿವರಿಸಿದರು.

ಶಾಲೆಯನ್ನು ಸುಸಜ್ಜಿತವಾಗಿ ನವೀಕರಿಸಿದ್ದು, ಈಜುಕೊಳ, ಸ್ಕೇಟಿಂಗ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಪ್ರತಿ ತರಗತಿಯ ಕೋಣೆಗಳು ವಿಶಾಲವಾಗಿದ್ದು, ಉತ್ತಮ ಗಾಳಿ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಮಕ್ಕಳಿಗೆ ಫಾರ್ಮ್ ಪಾರ್ಟಿ ಮಾಡಿರುವುದಕ್ಕೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಶಾಲೆಯ ಪ್ರಾಂಶುಪಾಲರಾದ ರಶ್ಮಿ‌ ಮಾತನಾಡಿ, ಶಾಲೆಯಲ್ಲಿ ಆಯೋಜಿಸಿರುವ ಫಾರ್ಮ್ ಪಾರ್ಟಿ ವಿನೂತನವಾಗಿದೆ. ಮಕ್ಕಳು ಅತ್ಯುತ್ಸಾಹದಿಂದ‌ ಪಾಲ್ಗೊಂಡು ಗ್ರಾಮೀಣ ಸೊಗಡಿನ ಜೊತೆಗೆ ಪ್ರಾಣಿ ಪಕ್ಷಿಗಳನ್ನು ನೇರವಾಗಿ ನೋಡಿ ಆನಂದಿಸಿದ್ದಾರೆ ಎಂದು‌ ಸಂತಸ ವ್ಯಕ್ತಪಡಿಸಿದರು.

ಶಾಲೆಯಲ್ಲಿ ವಿಶೇಷವಾಗಿ ಮಕ್ಕಳೊಂದಿಗೆ ಮಾತನಾಡುವ ಮರ ( ಟಾಕಿಂಗ್ ಟ್ರೀ)  ಪ್ರಮುಖ ಆಕರ್ಷಣೆಯಾಗಿತ್ತು. ಮ್ಯಾಜಿಕ್ ಮ್ಯಾಟ್ ಮಕ್ಕಳಿಗೆ ಆಟದ ಮೂಲಕ ಅಕ್ಷರ ಮತ್ತು ಸಂಖ್ಯೆಗಳನ್ನು ಗುರುತಿಸಲು ನೆರವಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕರಾದ ರಾಜು, ಶಾಲಾ ಸಿಬ್ಬಂದಿ, ಶಿಕ್ಷಕ ವೃಂದ ಪಾಲ್ಗೊಂಡಿತ್ತು.

Leave a Reply

Your email address will not be published. Required fields are marked *