ಫೋನ್ ಕದ್ದಾಲಿಕೆ ಹಾಗೂ ಕಂಪ್ಯೂಟರ್ ಡೇಟಾ ನಾಶಪಡಿಸಿದ ಪ್ರಕರಣ: ಇಬ್ಬರು ಪೊಲೀಸ್ ಅಧಿಕಾರಿಗಳ ಬಂಧನ

ಫೋನ್ ಕದ್ದಾಲಿಕೆ ಹಾಗೂ ಕಂಪ್ಯೂಟರ್‌ಗಳಲ್ಲಿನ ಅಧಿಕೃತ ಮಾಹಿತಿಯನ್ನು ನಾಶಪಡಿಸಿದ ಪ್ರಕರಣದಲ್ಲಿ ತೆಲಂಗಾಣದ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಹೆಚ್ಚುವರಿ ಡಿಸಿಪಿ ತಿರುಪತಣ್ಣ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್​ಪಿ) ಎನ್.ಭುಜಂಗರಾವ್ ಬಂಧಿತರ ಅಧಿಕಾರಿಗಳು.

ಬಂಧಿತ ಆರೋಪಿಗಳು ಈ ಹಿಂದೆ ಕ್ರಮವಾಗಿ ವಿಶೇಷ ಇಂಟೆಲಿಜೆನ್ಸ್ ಬ್ಯೂರೋ (ಎಸ್‌ಐಬಿ) ಮತ್ತು ಗುಪ್ತಚರ ಇಲಾಖೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಇದ್ದರು ಎನ್ನಲಾಗಿದೆ.

ವಿಚಾರಣೆಯ ವೇಳೆ ಇಬ್ಬರು ಪೊಲೀಸ್ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಖಾಸಗಿ ವ್ಯಕ್ತಿಗಳ ಮೇಲೆ ನಿಗಾ ಇಡುವ ಸಂಚು, ಫೋನ್​ ಕದ್ದಾಲಿಕೆಯಂತಹ ಸಂಚಿನಲ್ಲಿ ಭಾಗಿಯಾಗಿರುವ ಬಗ್ಗೆ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ಜೊತೆಗೆ ಈಗಾಗಲೇ ಬಂಧಿತರಾಗಿರುವ ವಿಶೇಷ ತನಿಖಾ ದಳದ (ಎಸ್​ಐಬಿ) ಡಿಎಸ್​ಪಿ ಆಗಿದ್ದ ಡಿ.ಪ್ರಣೀತ್ ಕುಮಾರ್ ಅಲಿಯಾಸ್ ಪ್ರಣೀತ್ ರಾವ್ ಮತ್ತು ಇತರ ಆರೋಪಿಗಳ ಜೊತೆಗೆ ಸಂಪರ್ಕ ಹೊಂದಿದ್ದಾಗಿ ತಿಳಿಸಿದ್ದಾರೆ. ಹೆಚ್ಚಿನ ವಿಚಾರಣೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

ಹಿಂದಿನ ಬಿಆರ್‌ಎಸ್ ಸರ್ಕಾರದ ಅವಧಿಯಲ್ಲಿ ವಿವಿಧ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಂದ ಗುಪ್ತಚರ ಮಾಹಿತಿಯನ್ನು ಅಳಿಸಿಹಾಕಿದ ಆರೋಪದಲ್ಲಿ ಹಾಗೂ ಆಪಾದಿತ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ಅಮಾನತುಗೊಂಡ ಡಿಎಸ್‌ಪಿ ಡಿ.ಪ್ರಣೀತ್ ರಾವ್ ಅವರೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *