ಆಸಕ್ತಿಯಿರುವ ಕೆಲಸವನ್ನೇ ಆಯ್ಕೆ ಮಾಡಿ: ಇಲ್ಲವಾದಲ್ಲಿ ಮಾಡುವ ಕೆಲಸದಲ್ಲಿ ಆಸಕ್ತಿ ವಹಿಸಿ: ಕೆ.ಎನ್.ಜನಾರ್ಧನ್‌

ಉದ್ಯಮಿಗಳಾಗಬಯಸುವವರು ಜೇನುಹುಳುವಿನಂತೆ ಕ್ರಿಯಾಶೀಲವಾಗಿಯೂ, ಇರುವೆಯಂತೆ ಶಿಸ್ತುಬದ್ಧವಾಗಿಯೂ ಜೀವನ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು. ಈ ಪ್ರಯತ್ನ ಸಫಲವಾಗಬೇಕಾದರೆ ಮಾಡುವ ಕೆಲಸದಲ್ಲಿ ಆಸಕ್ತಿಯಿರಬೇಕು. ಇಲ್ಲವಾದಲ್ಲಿ, ಆಸಕ್ತಿಯಿರುವ ಕೆಲಸವನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದು ರುಡ್‌ಸೆಟ್‌ ಸಂಸ್ಥೆಯ ನಿಕಟಪೂರ್ವ ಕಾರ್ಯನಿರ್ವಾಹಕ ನಿರ್ದೇಶಕರು, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು, ಕೊಡಗು ವಿಶ್ವವಿದ್ಯಾನಿಲಯದ ಸೆನೆಟ್‌ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರಾದ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿಗಳಾದ ಕೆ.ಎನ್‌. ಜನಾರ್ಧನ್‌ ಅವರು ತಿಳಿಸಿದರು.

ನೆಲಮಂಗಲ ತಾಲ್ಲೂಕಿನ ಅರಶಿನಕುಂಟೆಯಲ್ಲಿರುವ ರುಡ್‌ಸೆಟ್‌ ಸಂಸ್ಥೆಗೆ ಭೇಟಿ ನೀಡಿ, ಶಿಬಿರಾರ್ಥಿಗಳನ್ನು ಉದ್ದೇಶಿಸಿ, ಮಾತನಾಡಿದ ಅವರು, ಉಳಿಪೆಟ್ಟು ತಿಂದ ಕಲ್ಲು ಮಾತ್ರ ಶಿಲೆಯಾಗಲು ಸಾಧ್ಯ. ಉದ್ಯಮ ಆರಂಭಿಸಲು ವಿದ್ಯೆ, ಹಣ ಮುಖ್ಯವಲ್ಲ ಕೆಲಸ ಮಾಡಬೇಕೆನ್ನುವ ಮನಸ್ಥಿತಿ ಮುಖ್ಯ ಎಂದರಲ್ಲದೆ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸವಂತಿರಬೇಕು ಎಂದು ಹೇಳಿದರು.

ಹುಟ್ಟು ಸಾವಿನ ಮಧ್ಯೆ ಪಡೆದ ಒಂದು ಹೆಸರನ್ನು ಅಜರಾಮರ ಆಗುವಂತಹ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರಲ್ಲದೆ, ನಂಬಿಕೆ ವಿಶ್ವಾಸದೊಂದಿಗೆ ಒಳ್ಳೆಯ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.

ರುಡ್‌ಸೆಟ್‌ ಸಂಸ್ಥೆಯ ನಿರ್ದೇಶಕರಾದ ರವಿಕುಮಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ತರಬೇತಿ ಪಡೆಯುವುದು ಮಾತ್ರವಲ್ಲದೆ, ಪಡೆದ ತರಬೇತಿಯಲ್ಲಿ ವೃತ್ತಿ ಆರಂಭಿಸಿ ಯಶ ಕಾಣುವುದು ಪ್ರಾಮಾಣಿಕ ಪ್ರಯತ್ನದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಕರ್ನಾಟಕ ಶಾಸ್ತ್ರೀಯ ಸಂಗೀತದ ಗಾಯಕಿ, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ಧರ್ಮಪತ್ನಿ ಉಷಾ ಜನಾರ್ಧನ್‌ ಅವರು ಕಾರ್ಯಕ್ರಮದಲ್ಲಿ ಸೊಗಸಾಗಿ ಹಾಡಿದರಲ್ಲದೆ, ಶಿಬಿರಾರ್ಥಿಗಳಿಗೆ ಭಾವಿ ಉದ್ಯಮಿಗಳಾಗುವಂತೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ರುಡ್‌ಸೆಟ್‌ ಸಂಸ್ಥೆಯಿಂದ ತರಬೇತಿ ಪಡೆದು ಯಶಸ್ವಿ ಉದ್ಯಮಿಗಳಾಗಿರುವ ವಿ.ರಾಮಸ್ವಾಮಿ ಹಾಗೂ ಡೊರೆಟ್ಟಾ ಕ್ರಿಸ್ಟಬೆಲ್‌, ರುಡ್‌ಸೆಟ್‌ ಸಂಸ್ಥೆಯ ಉಪನ್ಯಾಸಕರಾದ ರವೀಂದ್ರ ಹಾಗೂ ವಿದ್ಯಾ ಹೊಸಮನಿ, ಕಚೇರಿ ಸಹಾಯಕರಾದ ಅರುಣ್‌ಕುಮಾರ್‌ ಹಾಗೂ ಸಂತೋಷ್‌, ಅತಿಥಿ ಉಪನ್ಯಾಸಕರಾದ ಮಮತಾ ಹಾಗೂ ನಾಗರಾಜ್‌, ಆಸರೆಯ ಸದಸ್ಯರು, ಸಂಸ್ಥೆಯ ಸಹ ಸಿಬ್ಬಂದಿ ಸೇರಿದಂತೆ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *