ದೊಡ್ಡಬಳ್ಳಾಪುರ: ಕ್ಷೇತ್ರದ ಜನತೆಗೆ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಹಾಗೂ ಹಾಲಿ ಶಾಸಕ ಧೀರಜ್ ಮುನಿರಾಜು ಅವರಿಂದ ನಯಾಪೈಸೆ ಉಪಯೋಗ ಆಗುತ್ತಿಲ್ಲ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.
ಹಾಲಿ ಮತ್ತು ಮಾಜಿ ಶಾಸಕರ ಇಬ್ಬಗೆಯ ಧೋರಣೆಯಿಂದ ಜನ ಬೇಸತ್ತು ಹೋಗಿದ್ದಾರೆ
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಇಎಸ್ಐ ಆಸ್ಪತ್ರೆ ನಿರ್ಮಾಣವಾಗಿ ಐದಾರು ವರ್ಷ ಕಳೆದರೂ ಅದರ ಕಾರ್ಯಾರಂಭ ಮಾಡಿಸಿಲ್ಲ. ಕೊನಘಟ್ಟ, ನಾಗದೇನಹಳ್ಳಿ, ಆದಿನಾರಾಯಣ ಹೊಸಹಳ್ಳಿ ಸೇರಿ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಆಗುತ್ತಿರುವ ಅನ್ಯಾಯಕ್ಕೆ ಯಾರೊಬ್ಬರೂ ಸ್ಪಂದಿಸಿಲ್ಲ. ಹಾಲಿ ಮತ್ತು ಮಾಜಿ ಶಾಸಕರ ಈ ಇಬ್ಬಗೆಯ ಧೋರಣೆಯನ್ನು ಜನ ಗಮನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಳೆದ ನಾಲ್ಕು ದಿನಗಳ ಹಿಂದೆ ಕುಂದಾಣ ಹೋಬಳಿಗೆ ಆಗಮಿಸಿದ್ದ ಮುಖ್ಯಮಂತ್ರಿಗಳ ಬಳಿಗೆ ರೈತರನ್ನು ಕರೆದೋಯ್ದು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿಲ್ಲ ಎಂದು ದೂರಿದರು.
ನನಗೆ ಯಾವ ಸಾಂವಿಧಾನಿಕ ಹುದ್ದೆ, ಅಧಿಕಾರ ಇಲ್ಲದಿದ್ದರೂ ರೈತರ ಸಮಸ್ಯೆಗೆ ಸ್ಪಂದಿಸುತ್ತಿದ್ದೇನೆ. ನಾಲ್ಕೈದು ಬಾರಿ ಧರಣಿನಿರತ ರೈತರನ್ನು ಅಧಿಕಾರಿಗಳು, ಮಾಜಿ ಸಿಎಂ ಕುಮಾರಸ್ವಾಮಿ ಅವರ ಬಳಿಗೆ ಕರೆದೋಯ್ದು ಬೇಡಿಕೆ ಈಡೇರಿಸಲು ಪ್ರಯತ್ನಿಸಿದ್ದೇನೆ. ಹಾಲಿ ಮತ್ತು ಮಾಜಿ ಶಾಸಕರಿಗೆ ರೈತರ ಕುರಿತು ಕಿಂಚಿತ್ತು ಕಾಳಜಿ ಇದ್ದರೆ ಕೂಡಲೇ ಸಿಎಂ, ಸಚಿವರು, ಎಲ್ಲ ಪಕ್ಷಗಳ ನಾಯಕರ ಭೇಟಿಗೂ ಮುಂದಾಗಲಿ. ಸಾಧ್ಯವಾದರೆ ರಾಷ್ಟ್ರಮಟ್ಟಕ್ಕೆ ಹೋಗಲು ನಾವು ಸಹಕಾರ ನೀಡುತ್ತೇವೆ ಎಂದರು.
ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಸರ್ಕಾರದಿಂದ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಜಾಣ್ಮೆ, ಇಚ್ಛಾಶಕ್ತಿ ಇರಬೇಕು. ಯಾರು ಏನು ತಂದರು ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ. ಇಬ್ಬರೂ ಕೂಡ ಕೆಸರೆರಚಾಟ ಬಿಟ್ಟು ಕ್ಷೇತ್ರದ ಅಭಿವೃದ್ಧಿಗೆ ಗಮನ ಹರಿಸಬೇಕು ಎಂದು ಹೇಳಿದರು.
ಈಗಾಗಲೇ ಎಲ್ಲೆಡೆ ಬರ ಪರಿಸ್ಥಿತಿ ಬಿಗಡಾಯಿಸಿದೆ. ಕುಡಿಯುವ ನೀರಿಲ್ಲದೇ ಜನ, ಜಾನುವಾರು, ಪ್ರಾಣಿ ಪಕ್ಷಿಗಳು ತತ್ತರಿಸಿ ಹೋಗುತ್ತಿವೆ. ಕ್ಷೇತ್ರದಲ್ಲೂ ನೀರಿಗೆ ಹಾಹಾಕಾರ ಎದುರಾಗುವ ಸಾಧ್ಯತೆ ಇದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮೊದಲು ಎಲ್ಲರಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಕಡೆ ಗಮನ ಹರಿಸಬೇಕಿದೆ ಎಂದರು.
ಪ್ರದೀಪ್ ಈಶ್ವರ್ ಕ್ಷಮೆಯಾಚಿಸಲಿ
ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಅವರು ಜನರಿಂದ ಆಯ್ಕೆಯಾದ ಜನಪ್ರತಿನಿಧಿ. ಸಾಕಷ್ಟು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿರುವ ವ್ಯಕ್ತಿ. ಆದರೆ, ಮಾಜಿ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಅವರು ಇಷ್ಟು ಕೆಳಮಟ್ಟಕ್ಕೆ ಇಳಿದು ಮಾತನಾಡುತ್ತಾರೆ ಎಂದು ಭಾವಿಸಿರಲಿಲ್ಲ. ಕೂಡಲೇ ಪ್ರದೀಪ್ ಈಶ್ವರ್ ಆಡಿರುವ ಮಾತುಗಳನ್ನು ವಾಪಸ್ ಪಡೆಯಬೇಕು. ಸಾರ್ವಜನಿಕವಾಗಿ ಚಿಕ್ಕಬಳ್ಳಾಪುರ ಜನತೆಗೆ ಕ್ಷಮೆ ಕೇಳಬೇಕು ಎಂದು ಹರೀಶ್ ಗೌಡ ಆಗ್ರಹಿಸಿದರು.
ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಪ್ರದೀಪ್ ಈಶ್ವರ ಅವರ ಗೆಲುವು ನಮ್ಮ ಪಕ್ಷದ ಅಭ್ಯರ್ಥಿಯ ನ್ಯೂನತೆಗಳಿಂದ ದೊರೆತಿದೆಯೇ ಹೊರತು ಮತ್ತೇನು ಅಲ್ಲ ಎಂದರು.
‘ಸಂಸದ ಅನಂತ್ ಕುಮಾರ್ ಹೆಗಡೆ ಒಬ್ಬ ಅರೆ ಹುಚ್ಚ’
ಸಂವಿಧಾನ ಬದಲಾವಣೆ ಕುರಿತು ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಆತ ಒಬ್ಬ ಅರೆ ಹುಚ್ಚ. ಅವರು ಈ ದೇಶದ ಪ್ರಜೆ ಆಗಲೂ ಅನರ್ಹ. ತಾನು ಐದು ಬಾರಿ ಸಂಸದನಾಗಲು ಸಂವಿಧಾನವೇ ಕಾರಣ ಎಂಬುದನ್ನು ಸಂವಿಧಾನವೇ ಕಾರಣ ಎಂಬುದನ್ನು ಮರೆತು ಬದಲಾವಣೆಯ ಮಾತನ್ನಾಡಿದ್ದಾರೆ. ಇಂತಹ ಮಾತುಗಳು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.