ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: ಡ್ರಗ್ಸ್, ಆಭರಣ, ಲ್ಯಾಪ್ ಟಾಪ್, ವಿದೇಶಿ ವಾಚ್ ಜಪ್ತಿ..!  

ಬೆಂಗಳೂರು ನಗರ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿ ತಂಡವು ಮಾದಕವಸ್ತು ಮಾರಾಟಗಾರರನ್ನು ಬಂಧಿಸಿರುವ ಬಗ್ಗೆ ತಿಳಿಸಿದರು. ಅದರ ಭಾಗವಾಗಿ ಕಾರ್ಯಾಚರಣೆಯನ್ನು ಕೈಗೊಂಡು, ಮೂರು ವಿದೇಶಿ ಮೂಲದ ಡ್ರಗ್ ಪೆಡ್ಲರ್‌ಗಳು ಹಾಗೂ ಹೊರ ರಾಜ್ಯದ 03 ಡ್ರಗ್ ಪೆಡ್ಲರ್‌ಗಳು ಸೇರಿದಂತೆ ಒಟ್ಟು 06 ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ. ಅವರಿಂದ ಒಟ್ಟು ₹ 44 ಲಕ್ಷ ಮೌಲ್ಯದ 54 ಗ್ರಾಂ, ಎಂ.ಡಿ.ಎಂ.ಎ ಕ್ರಿಸ್ಟೆಲ್, 410 ಗ್ರಾಂ. ಹೈಡ್ರೋ ಗಾಂಜಾ. 18 ಕೆಜಿ. ಗಾಂಜಾ ಹಾಗೂ ಕೃತ್ಯಕ್ಕೆ ಬಳಸಲಾಗುತ್ತಿದ್ದ 4 ಮೊಬೈಲ್ ಫೋನ್‌ಗಳು ಹಾಗೂ 4 ಎಲೆಕ್ಟ್ರಾನಿಕ್ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್ ಅವರು ತಿಳಿಸಿದರು.

ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಪೊಲೀಸರು ಲ್ಯಾಪ್ ಟಾಪ್ ಮತ್ತು ಕ್ರೋಮ್ ಬಾಕ್ಸ್‌ಗಳು ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.16 ರಂದು ಐದು ವ್ಯಕ್ತಿಗಳನ್ನು ಬಂದಿಸಿದ್ದಾರೆ. ಈ ಪೈಕಿ ಇಬ್ಬರು ವ್ಯಕ್ತಿಗಳು ಅದೇ ಕಂಪನಿಯಲ್ಲಿ ಲ್ಯಾಪ್‌ ಟಾಪ್ ಟೆಕ್ನಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದು, ಉಳಿದ ಮೂರು ವ್ಯಕ್ತಿಗಳು ಇವರ ಸಹಚರರಾಗಿರುತ್ತಾರೆಂದು ತಿಳಿದುಬಂದಿದೆ. ಒಟ್ಟು ₹16,00,000/- ಮೌಲ್ಯದ ವಿವಿಧ ಕಂಪನಿಯ 29  ಲ್ಯಾಪ್ ಟಾಪ್ ಗಳು ಮತ್ತು 59 ಕ್ರೋಮ್ ಬಾಕ್ಸ್ ಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ  ಪೊಲೀಸ್‌ ಅಧಿಕಾರಿಗಳು ಯಶಸ್ವಿಯಾಗಿರುತ್ತಾರೆ ಎಂದು ಮಾಹಿತಿ‌ ನೀಡಿದರು.

ಬೆಂಗಳೂರಿನ ಜೆ.ಪಿ ನಗರ ಪೊಲೀಸ್ ಠಾಣೆಯಲ್ಲಿ ಮಾ.9ರಂದು ಎರಡು ಪ್ರತ್ಯೇಕ ಮನೆ ದರೋಡೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಂದ 414 ಗ್ರಾಂ ಚಿನ್ನದ ವಡವೆಗಳನ್ನು ಮತ್ತು 104 ಗ್ರಾಂ ತೂಕದ ಬೆಳ್ಳಿ ವಸ್ತುಗಳನ್ನು ಹಾಗೂ 04 ವಿದೇಶಿ ಬ್ರಾಂಡ್‌ನ ವಾಚ್ ಗಳನ್ನು ವಶಪಡಿಸಿಕೊಂಡಿರುತ್ತಾರೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ₹ 28,00.000/- ಆಗಿರುತ್ತದೆ ಎಂದರು.

Leave a Reply

Your email address will not be published. Required fields are marked *