ತೋಟದ ಮನೆ ಬಳಿ ಇದ್ದ ನಾಯಿಯನ್ನು ಚಿರತೆ ಹೊತ್ತೊಯ್ದ ಘಟನೆ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಅಕ್ಕತಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೊಂಚುಹಾಕಿ ನಾಯಿಯ ಕುತ್ತಿಗೆಗೆ ಬಾಯಿ ಹಾಕಿ ಹೊತ್ತೊಯ್ಯುತ್ತಿರುವ ದೃಶ್ಯ ಮನೆ ಬಳಿ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಘಟನೆ ಫೆ.18ರ ರಾತ್ರಿ 1:40ರ ಸಮಯದಲ್ಲಿ ನಡೆದಿದೆ. ತೋಟದ ಮನೆ ಮಾಲೀಕ ಬೆಂಗಳೂರಿನಲ್ಲಿರುತ್ತಾರೆ. ಇಂದು ತೋಟ ನೋಡಲೆಂದು ತೋಟದ ಮನೆಗೆ ಬಂದಾಗ ನಾಯಿ ನಾಪತ್ತೆಯಾಗಿರುವುದು ಕಂಡುಬಂದಿದೆ. ಕೂಡಲೇ ಸಿಸಿಟಿವಿಯನ್ನು ಪರಿಶೀಲಿಸಿದಾಗ ಚಿರತೆ ಹೊತ್ತೊಯ್ಯುತ್ತಿರುವ ದೃಶ್ಯ ಕಂಡುಬಂದಿದೆ.
ಇತ್ತೀಚೆಗೆ ತಾಲೂಕಿನಲ್ಲಿ ಚಿರತೆಗಳ ಉಪಟಳ ಹೆಚ್ಚಾಗಿದೆ. ಕೆಲ ದಿನಗಳ ಹಿಂದೆ ಸೂಲುಕುಂಟೆಯಲ್ಲಿ ಹೆಣ್ಣು ಚಿರತೆ ಬೋನಿಗೆ ಬಿದ್ದಿತ್ತು. ಆ ಭಾಗದ ಜನ ನಿಟ್ಟುಸಿರು ಬಿಟ್ಟಿದ್ದರು. ಈಗ ಅಕ್ಕತಮ್ಮನಹಳ್ಳಿ ಗ್ರಾಮದಲ್ಲಿ ಚಿರತೆ ಕಾಟದಿಂದ ಆತಂಕ ಮನೆ ಮಾಡಿದೆ.
ಆದಷ್ಟು ಬೇಗ ಚಿರತೆಯನ್ನ ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯಲ್ಲಿ ಕೋರಿದ್ದಾರೆ.