ಒಂದೇ ದಿನ ವಿವಿಧ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಏಳು ಮಂದಿ ಮಹಿಳೆಯರಲ್ಲಿ ಮೂವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ನಡೆದಿದೆ. ಪಾವಗಡ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದಿತ್ತು.
ಸಂತಾನಹರಣ, ಗರ್ಭಕೋಶದ ಚಿಕಿತ್ಸೆ ಹಾಗೂ ಸಿಸರಿಯನ್ ಶಸ್ತ್ರಚಿಕಿತ್ಸೆಗೆ ಮೂವರು ಮಹಿಳೆಯರು ಒಳಗಾಗಿದ್ದರು.
ಫೆ.22ರಂದು 7 ಮಂದಿ ಮಹಿಳೆಯರಿಗೆ ಹೆರಿಗೆ ಸೇರಿದಂತೆ ವಿವಿಧ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.
30 ವರ್ಷದ ಅನಿತಾ ಅವರು ಸಂತಾನಹರಣ ಚಿಕಿತ್ಸೆ ನಡೆದ ದಿನವೇ ಸಾವನ್ನಪ್ಪಿದ್ದಾರೆ. ರಾಜವಂತಿ ಮೂಲದ ಅಂಜಲಿಗೆ ಸಿಸರಿಯನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಹೆರಿಗೆ ಬಳಿಕ ಅಂಜಲಿ ಸ್ಥಿತಿ ಗಂಭೀರವಾಗಿತ್ತು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಅಂಜಲಿಯನ್ನ ರವಾನಿಸಲಾಗಿತ್ತು. ಚಿಲಿತ್ಸೆ ಫಲಕಾರಿಯಾಗದೆ ಅಂಜಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಫೆ.24ರಂದು ಸಾವನ್ನಪ್ಪಿದ್ದಾರೆ.
ಬ್ಯಾಡನೂರು ಗ್ರಾಮದ 40 ವರ್ಷದ ನರಸಮ್ಮಗೆ ಗರ್ಭಕೋಶದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆ ಬಳಿಕ ನರಸಮ್ಮ ಸ್ಥಿತಿ ಗಂಭೀರವಾಗಿತ್ತು. ನರಸಮ್ಮ ಅವರನ್ನ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಫೆ.25ರಂದು ನರಸಮ್ಮ ಅಸುನೀಗಿದ್ದಾರೆ.
ಈ ಮೂವರು ಫೆ.22ರಂದು ಪಾವಗಡ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಮೂವರು ಸಾವಿಗೆ ನ್ಯಾಯ ಒದಗಿಸುವಂತೆ ಅಂಜಲಿ ಕುಟುಂಬಸ್ಥರಿಂದ ಪಾವಗಡದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.