ಸಿಮೆಂಟ್ ಉತ್ಪಾದನ ಕೈಗಾರಿಕೆ ಪ್ರಾರಂಭಕ್ಕೆ ತೀವ್ರ ವಿರೋಧ

ತಾಲೂಕಿನ ಕಂಟನಕುಂಟೆ ಹಾಗೂ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿ ಜಮೀನಿನಲ್ಲಿ ಸಿಮೆಂಟ್ ಉತ್ಪಾಧನ ಕೈಗಾರಿಕೆ ಪ್ರಾರಂಭಿಸಲು ಗ್ರಾಮ ಪಂಚಾಯಿತಿ ವತಿಯಿಂದ ಅನುಮತಿ ನೀಡಿರುವುದನ್ನು ರದ್ದುಗೊಳಿಸುವಂತೆ ಗುರುವಾರ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಿ.ಎಲ್.ನಂಜೇಗೌಡ ನೇತೃತ್ವದಲ್ಲಿ ಪಿಡಿಒ ಅವರಿಗೆ ಮನವಿ ಪತ್ರಸಲ್ಲಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಸಿಮೆಂಟ್ ಕೈಗಾರಿಕೆ ಸ್ಥಾಪನೆ ಮಾಡುವ ಕುರಿತಂತೆ ಸ್ಥಳೀಯ ರೈತರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಗಮನಕ್ಕು ಸಹ ತಾರದಲೇ ನಿರಪೇಕ್ಷಣ ಪ್ರಮಾಣ ಪತ್ರವನ್ನು ನೀಡಲಾಗಿದೆ. ಇದೇ ರೀತಿ ಕಂಟನಕುಂಟೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಹ ಸದಸ್ಯರು,ಸ್ಥಳೀಯ ರೈತರ ಅಭಿಪ್ರಾಯ ಕೇಳದಲೇ ಅನುಮತಿ ನೀಡಿರುವುದು ಖಂಡನೀಯ.

ದೊಡ್ಡಬಳ್ಳಾಪುರ ನಗರಕ್ಕೆ ಸಮೀಪದಲ್ಲೇ ಇರುವ ಈ ಎರಡೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರ ಸಂಖ್ಯೆಯೇ ಹೆಚ್ಚಾಗಿದೆ. ರೇಷ್ಮೆ, ಹೂವು, ದ್ರಾಕ್ಷಿ, ವಿವಿಧ ರೀತಿಯ ಹಣ್ಣು,ತರಕಾರಿಗಳನ್ನು ಹೆಚ್ಚಾಗಿ ಬೇಳೆಯುವ ಪ್ರದೇಶವು ಇದಾಗಿದೆ.

ಕೃಷಿ ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಸಾರ್ವಜನಿಕ ಸಭೆಯನ್ನು ನಡೆಸಿ ಜನರ ಅಭಿಪ್ರಾಯವನ್ನು ಪಡೆಯಬೇಕು. ಆದರೆ ಈ ಯಾವುದೇ ನಿಯಮವನ್ನು ಪಾಲಿಸದೆ, ಗ್ರಾಮ ಪಂಚಾಯಿತಿ ಸದಸ್ಯರ ಗಮನಕ್ಕು ಸಹ ಸಭೆಯಲ್ಲಿ ತಾರದಲೆ ಕೈಗಾರಿಕೆ ಸ್ಥಾಪನೆಗೆ ಅನುಮತಿ ನೀಡಿರುವುದನ್ನು ರದ್ದುಪಡಿಸುವಂತೆ ಮನವಿ ಸಲ್ಲಿಸಲಾಗಿದೆ.

ಈ ಪ್ರದೇಶದಲ್ಲಿ ಸಿಮೆಂಟ್ ಕೈಗಾರಿಕೆಯಿಂದ ಬರುವ ದೂಳಿನಿಂದ ಸಾವಿರಾರು ಎಕರೆಯಲ್ಲಿ ಕೃಷಿ ಮಾಡುವುದನ್ನೇ ರೈತರು ಕೈಬಿಡಬೇಕಾದ ಸ್ಥಿತಿ ಬರಲಿದೆ. ಕೆಲವೇ ಜನರ ಉದ್ಯೋಗದಿಂದ ಸಾವಿರಾರು ಕೃಷಿ ಕುಟುಂಬಗಳು ಬೆಳೆ ಇಲ್ಲದೆ ಬರಿಗೈ ಆಗುವಂತಹ ಸ್ಥಿತಿ ನಿರ್ಮಾಣವಾಗಲಿದೆ. ಬಯಲು ಪ್ರದೇಶ ಇರುವ ಕಡೆಯಲ್ಲಿ ಸ್ಥಾಪನೆ ಮಾಡಬೇಕಿರುವ ಕೈಗಾರಿಕೆಯನ್ನು ಜನವಸತಿ ಹಾಗೂ ಸಮೃದ್ಧ ಕೃಷಿ ಇರುವ ಸ್ಥಳದಲ್ಲಿ ಸ್ಥಾಪನೆ ಮಾಡುತ್ತಿರುವ ಕ್ರಮವೇ ಅವೈಜ್ಞಾನಿಕತೆಯಿಂದ ಕೂಡಿದೆ ಎಂದು ದೂರಿದ್ದಾರೆ.

ಮನವಿ ಸಲ್ಲಿಕೆ ಸಂದರ್ಭದಲ್ಲಿ ಸಿಮೆಂಟ್ ಕೈಗಾರಿಕೆ ಸ್ಥಾಪನ ಮಾಡುತ್ತಿರುವ ಸುತ್ತಮುತ್ತಲಿನ ಗ್ರಾಮದ ಕೃಷಿಕರಾದ ಬಾಲಚಂದ್ರ, ಶ್ರೀಧರ್, ಶ್ರೀನಿವಾಸರೆಡ್ಡಿ, ಮುನೇಗೌಡ, ಶ್ರೀಕಂಠಮೂರ್ತಿ, ಶೆಟ್ಟಪ್ಪ, ಮನೋಹರ್,ಪುಟ್ಟಪ್ಪ ಇದ್ದರು.

ಸಿಮೆಂಟ್ ಕೈಗಾರಿಕೆ ಸ್ಥಾಪನೆಗೆ ಹಾಡೋನಹಳ್ಳಿ ಹಾಗೂ ಕಂಟನಕುಂಟೆ ಗ್ರಾಮ ಪಂಚಾಯಿತಿ ವತಿಯಿಂದ ನೀಡಲಾಗಿದ್ದ ಅನುಮತಿಯನ್ನು ಹಿಂದಕ್ಕೆ ಪಡೆದಿರುವುದಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *