ಕೇಂದ್ರದಿಂದ ನ್ಯಾಯಯುತ ಪಾಲು ಬರದಿದ್ದರೂ ಆರ್ಥಿಕವಾಗಿ ಸುಭದ್ರವಾಗಿದ್ದೇವೆ- ಸಿಎಂ ಸಿದ್ದರಾಮಯ್ಯ

ವಿತ್ತೀಯ ಕೊರತೆ 82,981 ಕೋಟಿ ರೂ.ಗಳು ರಷ್ಟಿದ್ದು, ರಾಜ್ಯದ ಜಿಎಸ್‌ಡಿಪಿ 2.95% ರಷ್ಟಿದೆ. ಇದು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ 2002ರಲ್ಲಿ ನಿಗದಿಪಡಿಸಿರುವ ಶೇ.3 ರ ಮಿತಿಯೊಳಗೆ ಇದ್ದು, ವಿತ್ತೀಯ ಶಿಸ್ತು ಪಾಲಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕದಲ್ಲಿ ರಾಜಸ್ವ ಕೊರತೆ 27,354 ಕೋಟಿ ರೂ.ಇದ್ದು, 0.97% ರಷ್ಟಿದೆ. ಹೊಣೆಗಾರಿಕೆಯು(Borrowings)  1,05,246 ಕೋಟಿಗಳಿದ್ದು, ಜಿಎಸ್‌ಡಿಪಿಯ ಶೇ.23.68ರಷ್ಟಿದೆ. ರಾಜಸ್ವ ಹೆಚ್ಚಳವು (Revenue Surplus) ಮುಂದಿನ ವರ್ಷದಿಂದ ಸ್ಥಿರಗೊಳ್ಳಲಿದೆ ಎಂದರು.

2017-2018 ರಿಂದ ಇಲ್ಲಿಯವರೆಗೆ ರೂ.1,87,000 ಲಕ್ಷ ಕೋಟಿ ಬಂದಿದ್ದರೆ ರಾಜ್ಯ ಅಭಿವೃದ್ಧಿಯಾಗುತ್ತಿತ್ತು. 6 ವರ್ಷಗಳಲ್ಲಿ ರೂ.62,000 ಕೋಟಿ ಹಂಚಿಕೆಯಲ್ಲಿ ಅನ್ಯಾಯವಾಗಿದೆ. ಕೇಂದ್ರದಿಂದ ನ್ಯಾಯಯುತ ಪಾಲು ಬರದಿದ್ದರೂ ಆರ್ಥಿಕವಾಗಿ ಸುಭದ್ರವಾಗಿದ್ದೇವೆ. ಗ್ಯಾರಂಟಿಗಳಿಗೆ ರೂ.52,009 ಕೋಟಿ ಅಂದಾಜಿಸಲಾಗಿದೆ. ಇದಕ್ಕೂ ಹೆಚ್ಚು ಬೇಕಾದಲ್ಲಿ ನೀಡಲಾಗುವುದು ಎಂದಿದ್ದಾರೆ.

ಉತ್ತರ ಪ್ರದೇಶ ರಾಜ್ಯದಿಂದ 49% ತೆರಿಗೆ  ಹೋದರೆ ಕೇಂದ್ರದಿಂದ ಸ್ವೀಕೃತಿ ರೂ.3,12,280 ಕೋಟಿ ಬರುತ್ತದೆ. ಕರ್ನಾಟಕದಿಂದ 77 % ತೆರಿಗೆ ಕೇಂದ್ರಕ್ಕೆ ಹೋದರೆ ಮುಂದಿನ ವರ್ಷಕ್ಕೆ ರಾಜ್ಯಕ್ಕೆ ಕೇವಲ 59,785 ರೂ. ಅಂದರೆ ಕೇವಲ 23% ಬರುತ್ತದೆ. ಉತ್ತರಪ್ರದೇಶ, ರಾಜಸ್ಥಾನ, ಮದ್ಯಪ್ರದೇಶ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಲು ನಮಗೆ ವಿರೋಧವಿಲ್ಲ. ಆದರೆ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕತ್ತರಿಸಿದಂತೆ, ಕೇಂದ್ರ Bharatiya Janata Party (BJP) ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡಬಾರದು ಎಂದು ತಿಳಿಸಿದರು.

ಸಾರ್ವತ್ರಿಕ ಮೂಲ ಆದಾಯದಂತೆ ಪ್ರತಿಯೊಬ್ಬರಿಗೆ ವಾರ್ಷಿಕವಾಗಿ 50 ರಿಂದ 55 ಸಾವಿರ ರೂ. ಸಿಗುತ್ತದೆ. 155 ಕೋಟಿ ಮಹಿಳಾ ಪ್ರಯಾಣಿಕರು ಬಸ್ ಗಳಲ್ಲಿ ಉಚಿತವಾಗಿ ತಿರುಗಾಡಿದರೆ, ಅನ್ನಭಾಗ್ಯದಡಿ ಉಚಿತ ಅಕ್ಕಿ ಬದಲು ಹಣ ಕೊಡುತ್ತಿದ್ದೇವೆ, ವಿದ್ಯುತ್ ಬಿಲ್ ಕಟ್ಟಬೇಡಿ, 1.17 ಲಕ್ಷ ಮಹಿಳೆಯರಿಗೆ 2,000 ರೂ. ತಿಂಗಳಿಗೆ ನೀಡಿದರೆ, ಅದನ್ನು ಬಿಟ್ಟಿ ಭಾಗ್ಯ ಎಂದು ಬಡವರಿಗೆ ಅವಮಾನಿಸಿದ್ದಾರೆ ಎಂದು ಹೇಳಿದರು.

ನಮ್ಮ ಆಯವ್ಯಯ ಎಲ್ಲರನ್ನೂ ಒಳಗೊಂಡ ಸಾಮಾಜಿಕ ನ್ಯಾಯದ ಆಧಾರದ ಮೇಲೆ ರಚಿತವಾಗಿದೆ. ಎಲ್ಲ ಜಾತಿ, ಧರ್ಮಗಳು, ಸೇರಿದಂತೆ ಎಲ್ಲರಿಗೂ ಕೊಂಡುಕೊಳ್ಳುವ ಶಕ್ತಿ ಹೆಚ್ಚಾಗಲಿ ಎಂದು ಗ್ಯಾರಂಟಿ ಕಾರ್ಯಕ್ರಮ ಜಾರಿ ಮಾಡಲಾಗಿದೆ. ದೂರದೃಷ್ಟಿಯಿರುವ, ಎಲ್ಲರನ್ನೂ ಒಳಗೊಂಡ, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಆಯವ್ಯಯ ಇದಾಗಿದೆ ಎಂದರು.

ಬಸವಣ್ಣನವರು ಸಮಾನತೆಯ ಕನಸು ಕಂಡಿದ್ದವರು. ಸಮಸಮಾಜಕ್ಕಾಗಿ ಚಳವಳಿ ಮಾಡಿದವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದೇವೆ. ಕೇಂದ್ರ ಬಿಜೆಪಿ ಸರ್ಕಾರದ ಅವಧಿಯದ್ದು ಶೇ 5.8% ಸರ್ಕಾರ. ನಮ್ಮದು ಶೇ 2.95% ವಿತ್ತೀಯ ಕೊರತೆ (ಫಿಸ್ಕಲ್ ಡೆಫಿಸಿಟ್) ಇದೆ. ಒಟ್ಟಾರೆ ನಮ್ಮದು ಜನಪರ ಬಜೆಟ್. ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಸಮಾನವಾಗಿ ಬೆಳೆಸುವ ಕೆಲಸ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ರೂ. 1,20,000 ಕೋಟಿ ಅಭಿವೃದ್ಧಿಗೆ ಖರ್ಚು ಮಾಡಿದರೆ ಅದು ಅಭಿವೃದ್ಧಿಪೂರಕ ಬಜೆಟ್. 52,009 ಕೋಟಿ ಬಡವರಿಗೆ ಖರ್ಚು ಮಾಡಿದ್ದೇವೆ, ಅದು ಕೂಡ ಅಭಿವೃದ್ಧಿಗೆ ಪೂರಕವಾಗಿರುವಂಥದ್ದು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಿಂದಿನ ಬಜೆಟ್‌ನಲ್ಲಿ ರೂ.77,750 ಕೋಟಿ ರೂ.ಗಳ ಸಾಲ, 23 ಸಾವಿರ ಕೋಟಿ ರೂ.ಗಳ ಋಣೇತರ ಸ್ವೀಕೃತಿಗಳಾಗಿದೆ. ಕೇಂದ್ರ ಸರ್ಕಾರ 16.85 ಲಕ್ಷ ಕೋಟಿ ಈ ವರ್ಷಕ್ಕೆ ಸಾಲ ಮಾಡಿದೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಈಗ ಬಿಜೆಪಿ ವಕ್ತಾರ ಆಗಿಬಿಟ್ಟಿದ್ದಾರೆ. ರೂ. 3,71,383 ಕೋಟಿ ಗಾತ್ರದ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ 3 ಸಾವಿರ ಕೋಟಿ  (1%ಕ್ಕಿಂತ ಕಡಿಮೆ) ಕೊಡಲಾಗಿದೆ. ಎಸ್.ಸಿ.ಪಿ /ಟಿ.ಎಸ್‍.ಪಿ ಯಲ್ಲಿ 2017-18 ರಲ್ಲಿ 30 ಸಾವಿರ ಕೋಟಿ ನೀಡಲಾಗಿತ್ತು. ಕಳೆದ ಜುಲೈ ಬಜೆಟ್ ನಲ್ಲಿ ರೂ. 34 ಸಾವಿರ ಕೋಟಿ ಕೊಡಲಾಗಿತ್ತು. ಈಗ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ರೂ.39 ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ. ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ. ಬಾಯಿಯಲ್ಲಿ ಮಾತ್ರ ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್ ಎನ್ನುತ್ತಾರೆ. ಎಲ್ಲದರಲ್ಲೂ ಧಾರ್ಮಿಕ ದ್ವೇಷ ಹುಡುಕುವ ಬಿಜೆಪಿಗೆ ಕಾಮಾಲೆ ರೋಗ ಬಂದಿರಬಹುದು ಎಂದರು.

ಬೆಂಗಳೂರಿಗೆ ಹೆಚ್ಚು ಕಾರ್ಯಕ್ರಮಗಳನ್ನು ನೀಡಲಾಗಿದೆ. ಬಿಜೆಪಿ ಸರ್ಕಾರ ಬೆಂಗಳೂರನ್ನು ನಿರ್ಲಕ್ಷ್ಯ ಮಾಡಿತ್ತು. ಈ ಬಾರಿ ಹೆಚ್ಚು ಯೋಜನೆ ಕೊಡಲಾಗಿದೆ. ಬ್ರ್ಯಾಂಡ್ ಬೆಂಗಳೂರು 1.50 ಕೋಟಿ ಜನರಿದ್ದು, ಅವರಿಗೆ ಮೂಲಭೂತ ಸೌಕರ್ಯಕ್ಕೆ ಅನುದಾನ ನೀಡಲಾಗಿದೆ. ಹೈದರಾಬಾದ್ ಕರ್ನಾಟಕ್ಕೆ 1,500 ಕೋಟಿ ರೂ.ಗಳು ಈವರೆಗ ವೆಚ್ಚವಾಗಿದ್ದು, ಈ ಬಾರಿ  ಕ್ರಿಯಾ ಯೋಜನೆಯನ್ನು ಏಪ್ರಿಲ್ ನಲ್ಲಿಯೇ  ತಯಾರಿಸಿ ಹೆಚ್ಚು ವೆಚ್ಚ ಮಾಡಲಾಗುವುದು ಎಂದು ಹೇಳಿದರು.

Leave a Reply

Your email address will not be published. Required fields are marked *