ಈ ವರ್ಷ ಕಡಿಮೆ ಮಳೆಯಾಗಿ ಬರಗಾಲದ ಛಾಯೆ ಇರುವದರಿಂದ ಅರಣ್ಯದೊಳಗಿನ ಪ್ರಾಣಿ-ಪಕ್ಷಿಗಳಿಗೆ ವನ್ಯಜೀವಿಗಳಿಗೆ ನೀರಿನ ಕೊರತೆ ಆಗದಂತೆ ನೀರುಗುಂಡಿ (ವಾಟರ್ ಹೋಲ್)ಗಳಿಗೆ ಜಲಪೂರಣ ಮಾಡುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ನೀಡಿದ್ದ ಸೂಚನೆಯಂತೆ, ಅರಣ್ಯ ಇಲಾಖೆ ಕೆರೆ, ಕಟ್ಟೆಗೆ ನೀರು ತುಂಬಿಸುವ ಕಾರ್ಯ ಆರಂಭಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಈಶ್ವರ್ ಖಂಡ್ರೆ, ಬಂಡೀಪುರ ರಕ್ಷಿತ ಅರಣ್ಯಕ್ಕೆ ಇತ್ತೀಚೆಗೆ ನಾನು ಭೇಟಿ ನೀಡಿದ್ದಾಗ, ಮಳೆಯ ಕೊರತೆಯಿಂದ ಬೇಸಿಗೆ ಪೂರ್ವದಲ್ಲೇ ಬಿರುಬಿಸಿಲು ಕಾಣಿಸಿಕೊಂಡಿದ್ದು, ನೀರಿಲ್ಲದೆ ಬರಿದಾಗುತ್ತಿರುವ ಜಲಗುಂಡಿಗಳನ್ನು ಕಂಡು ಕಳವಳ ವ್ಯಕ್ತಪಡಿಸಿದ್ದೆ. ಇದರಿಂದ ನೀರು ಅರಸಿ ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬರುವ ಕಾರಣ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುವ ಅಪಾಯವಿದ್ದು, ತಕ್ಷಣವೇ ರಾಜ್ಯದಾದ್ಯಂತ ಕಾನನದೊಳಗಿರುವ ಜಲ ಗುಂಡಿಗಳಿಗೆ ಮರುಪೂರಣ ಮಾಡಿ ಜಿಪಿಎಸ್ ವಿಡಿಯೋ ಮತ್ತು ಚಿತ್ರ ಕಳುಹಿಸುವಂತೆ ಸೂಚನೆ ನೀಡಿದ್ದೆ. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾಗಿರುವ ವಲಯ ಅರಣ್ಯಾಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಮುಖ್ಯ ಅರಣ್ಯ ಸಂರಕ್ಷಾಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಅರಣ್ಯದೊಳಗಿನ ಕೆರೆ, ಕಟ್ಟೆ ಸೇರಿದಂತೆ ಎಲ್ಲ ಜಲಗುಂಡಿಗಳಿಗೆ ಸೌರ ಪಂಪ್ ಸೆಟ್ ಅಳವಡಿಸಿದ ಕೊಳವೆ ಬಾವಿಗಳಿಂದ ಮತ್ತು ಟ್ಯಾಂಕರ್ ಮೂಲಕ ನೀರು ಹಾಯಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಶೇ.50ಕ್ಕಿಂತ ಕಡಿಮೆ ನೀರು ಸಂಗ್ರಹ ಇರುವ ಮತ್ತು ಸಂಪೂರ್ಣ ಬತ್ತಿ ಹೋಗಿರುವ ಜಲಗುಂಡಿಗಳ ಪೈಕಿ ಕಾಡು ಪ್ರಾಣಿಗಳು ಹೆಚ್ಚಾಗಿ ಬರುವ ಕಡೆಗಳಲ್ಲಿ ಬರಿದಾಗಿರುವ ಮತ್ತು ಬರಿದಾಗುತ್ತಿರುವ ವಾಟರ್ ಹೋಲ್ ಗಳಿಗೆ ಆದ್ಯತೆಯ ಮೇಲೆ ನೀರು ಹಾಯಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಅರಣ್ಯದೊಳಗೆ ನಿಯಮಾನುಸಾರ ಅವಕಾಶ ಇರುವ ಕಡೆ ಕೊಳವೆ ಬಾವಿ ಕೊರೆಸಿ, ಸೌರ ಪಂಪ್ ಸೆಟ್ ಅಳವಡಿಸಿ ಅದಕ್ಕೆ ಆನೆ ದಾಳಿ ಮಾಡದಂತೆ ರೈಲ್ವೆ ಬ್ಯಾರಿಕೇಡ್ ಹಾಕಲು ಅಥವಾ ಇತರ ಯಾವುದೇ ಮೂಲಗಳಿಂದ ನೀರು ಹಾಯಿಸಲು ಮತ್ತು ಮೃಗಾಲಯಗಳಲ್ಲಿನ ಗುಂಡಿಗಳಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸಲು ಸೂಚನೆ ನೀಡಿದ್ದೇನೆ ಎಂದರು.
ಒಟ್ಟಾರೆಯಾಗಿ ಮಳೆಗಾಲ ಆರಂಭವಾಗುವವರೆಗೆ ವನ್ಯಜೀವಿಗಳು ನೀರು ಹುಡುಕಿಕೊಂಡು ಅರಣ್ಯದಿಂದ ನಾಡಿಗೆ ಬಾರದಂತೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದೇನೆ ಎಂದು ಹೇಳಿದರು.
ಅದೇರೀತಿ ಪ್ರಾಣಿ ಪ್ರಿಯರು ನೀರಿನ ತೊಟ್ಟಿಗಳಿಗೆ ನೀರು ತುಂಬಿಸಿ ಪ್ರಾಣಿಗಳ ದಾಹ ತೀರಿಸುತ್ತಿರುವುದು ಶ್ಲಾಘನೀಯ.