ಹಾಡೋನಹಳ್ಳಿ ಗ್ರಾಮದಲ್ಲಿ ಮದ್ಯದ ಅಂಗಡಿ ತೆರೆಯಲು ಗ್ರಾಮಸ್ಥರ ವಿರೋಧ

ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ಎಂ.ಎಸ್.ಐ.ಎಲ್. ವತಿಯಿಂದ ಮದ್ಯದ ಅಂಗಡಿ ತೆರಯಲು ಅನುಮತಿ ನೀಡುತ್ತಿರುವುದಕ್ಕೆ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

2013 ರಿಂದಲೂ ಇಲ್ಲಿ ಮದ್ಯದ ಅಂಗಡಿ ತೆರೆಯದಂತೆ ಗ್ರಾಮಸ್ಥರು ಹಲವಾರು ಬಾರಿ ಹೋರಾಟಗಳನ್ನು ಮಾಡುತ್ತ ಬಂದಿದ್ದರು ಸಹ ಈಗ ಮತ್ತೊಮ್ಮೆ ಮದ್ಯದ ಅಂಗಡಿ ತೆರೆಯಲು ಸಿದ್ದತೆ ನಡೆಸುತ್ತಿರುವುದು ಖಂಡನೀಯ.

ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯಸ್ವಾಮಿ ಕ್ಷೇತ್ರಕ್ಕೆ ಪ್ರತಿ ದಿನ ರಾಜ್ಯದ ವಿವಿಧೆಡೆಗಳಿಂದ ನೂರು ಜನ ಭಕ್ತಾದಿಗಳು ಬಂದು ಹೋಗುವ, ಜಿಲ್ಲೆಯ ರೈತರು, ರೈತ ಮಹಿಳೆಯರು ತೆರಬೇತಿಗಾಗಿ ಬರುವ ಹಾಡೋನಹಳ್ಳಿಯಲ್ಲಿನ ಕೃಷಿ ವಿಜ್ಞಾನ ಕೇಂದ್ರ ಹಾಗೂ ಶಾಲೆ, ಗ್ರಾಮದ ವಾಸದ ಮನೆಗಳು ಇರುವ ಸ್ಥಳದಲ್ಲಿ ಮದ್ಯದ ಅಂಗಡಿ ತೆರೆಯಲು ಮುಂದಾಗಿರುವುದು ಅವೈಜ್ಞಾನಿಕ ಕ್ರಮವಾಗಿದೆ.

ಈಗಾಗಲೇ ಹಾಡೋನಹಳ್ಳಿಗೆ ಸಮೀಪದಲ್ಲೇ ತೂಬಗೆರೆಯಲ್ಲಿ ಮದ್ಯದ ಅಂಗಡಿ ಇದ್ದು ಇದರಿಂದಲೇ ಸಂಜೆ ವೇಳೆ ಸಾಕಷ್ಟು ಜನ ಕುಡುಕರ ಹಾವಳಿ ಮಿತಿ ಮೀರಿದೆ ಎಂದು ದೂರಿರುವ ಗ್ರಾಮದ ಮುಖಂಡ ಎಂ.ಮುನೇಗೌಡ, ಮದ್ಯದ ಅಂಗಡಿ ತೆರೆಯದಂತೆ ಈ ಹಿಂದೆ ಸ್ತ್ರೀಶಕ್ತಿ ಸಂಘದ ಮಹಿಳೆಯರು, ಗ್ರಾಮಸ್ಥರು ನೀಡಿದ್ದ ಮನವಿಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಮದ್ಯದ ಅಂಗಡಿ ತೆರೆಯದಂತೆ ತಡೆದಿದ್ದರು.

ಈಗ ಮತ್ತೆ ಎಂಎಸ್ಐಎಲ್ ವತಿಯಿಂದ ಮದ್ಯದ ಅಂಗಡಿ ತೆರೆಯಲು ಸಿದ್ದತೆ ನಡೆಸಿರುವುದು ಈ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆಯು ಹೆಚ್ಚಾಗಲಿದೆ. ಗ್ರಾಮದಲ್ಲಿ ಸತತ 10 ವರ್ಷಗಳಿಂದ ವಿರೋಧವಿದ್ದರೂ ಸಹ ಅಬಕಾರಿ ಇಲಾಖೆಯವರು ಸ್ಥಳ ಪರಿಶೀಲನೆ ಪ್ರಸ್ತಾವನೆ ಕೈಗೊಳ್ಳುವುದಕ್ಕೆ ಗ್ರಾಮದ ಗ್ರಾಮಸ್ಥರ ವಿರೋಧ ಇದೆ. ಗ್ರಾಮವನ್ನು ಮದ್ಯ ಮುಕ್ತ ಹಾಗೂ ಮಹಿಳೆಯರ ಸುರಕ್ಷತೆ, ಘಾಟಿಯಲ್ಲಿನ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಬರುವ ಭಕ್ತಾಧಿಗಳ ಸುರಕ್ಷತಾ ದೃಷ್ಟಿಯಿಂದ ಹಾಡೋನಹಳ್ಳಿ ಗ್ರಾಮದಲ್ಲಿ ಮದ್ಯದ ಅಂಗಡಿ ತೆರಯಲು ಯಾರಿಗೂ ಸಹ ಅನುಮತಿ ನೀಡದಂತೆ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *