ಫೆ.14ರಂದು ಸಿಆರ್‌ಪಿಎಫ್ ಗ್ರೂಪ್ ಸೆಂಟರ್ ನಲ್ಲಿ ಪುಲ್ವಾಮ ಹುತಾತ್ಮ ಯೋಧರ 5ನೇ ವರ್ಷದ ಪುಣ್ಯಸ್ಮರಣೆ

19ರ ಫೆ.14ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆಯ ಭದ್ರತಾ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಪುಲ್ವಾಮದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ CRPF ಯೋಧರ 5ನೇ ವರ್ಷದ ಪುಣ್ಯಸ್ಮರಣೆಯನ್ನು ಫೆ.14 ರಂದು ಇಲ್ಲಿನ ಸಿಆರ್ಪಿಎಫ್ ಗ್ರೂಪ್ ಸೆಂಟರ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಿಆರ್ಪಿಎಫ್ ನಿವೃತ್ತ ಐಜಿಪಿ ಕೆ.ಅರ್ಕೇಶ್ ತಿಳಿಸಿದರು.

ಯಲಹಂಕದ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ‌ ಅರೆಸೇನಾ ಪಡೆಗಳ‌ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪುಲ್ವಾಮ ದಾಳಿಯ ಹುತಾತ್ಮ ಯೋಧರು ಹಾಗೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಎಲ್ಲ ಯೋಧರಿಗೂ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸಿಆರ್‌ಪಿಎಫ್ ಮೈದಾನದಲ್ಲಿ ನಡೆಯುವ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಸರ್ಕಾರದ ಸಚಿವರು ಭಾಗವಹಿಸಲಿದ್ದಾರೆ. ಸುಮಾರು 5 ಸಾವಿರ ನಿವೃತ್ತ ಸಿಆರ್ಪಿಎಫ್ ಯೋಧರು ಕಾರ್ಯಕ್ರಮದಲ್ಲಿ ಭಾಗವಹಿಸಿ ಹುತಾತ್ಮರಿಗೆ ನಮನ ಸಲ್ಲಿಸಲಿದ್ದಾರೆ ಎಂದು ಹೇಳಿದರು.

ಕೇಂದ್ರೀಯ ಅರೆಸೇನಾಪಡೆಗಳು ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಗೃಹ ಸಚಿವಾಲಯದಡಿ ಬರುವ ಅರೆಸೇನಾ ಪಡೆಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿವೆ. ಭಾರತೀಯ ಸೇನೆಗೆ ಸಿಗುವ ಸವಲತ್ತುಗಳು ಅರೆಸೇನಾ ಪಡೆಗಳಿಗೆ ಸಿಗುತ್ತಿಲ್ಲ. ಭಾರತೀಯ ಸೇನೆ ಯುದ್ಧದ ಸಮಯದಲ್ಲಿ ಮಾತ್ರ ಅಖಾಡಕ್ಕಿಳಿಯಲಿದೆ. ಆದರೆ, ಅರೆಸೇನೆ ಪಡೆಗಳು ನಿರಂತರ ಗಡಿ ಕಾಯುವ ಜೊತೆಗೆ ಆಂತರಿಕ ಭದ್ರತೆಯ ಜವಾಬ್ದಾರಿ ವಹಿಸಿವೆ. ಶಾಂತಿ ಸ್ಥಾಪನೆಯಲ್ಲಿ ಪ್ರಮಖ ಪಾತ್ರ ವಹಿಸಿವೆ. ಸ್ವಾತಂತ್ರ್ಯ ನಂತರದಲ್ಲಿ 35 ಸಾವಿರ ಸಿಆರ್ ಪಿಎಫ್ ಯೋಧರು ವಿವಿಧ‌ ಸಂದರ್ಭಗಳಲ್ಲಿ ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ. ಆದರೆ, ದೇಶ ಅವರನ್ನು ಸ್ಮರಿಸಿಲ್ಲ.  ಹಾಗಾಗಿ ಫೆ.4 ರಂದು 5 ನೇ ವರ್ಷದ ಪುಣ್ಯ ಸ್ಮರಣೆ ಹಮ್ಮಿಕೊಂಡಿದ್ದೇವೆ. ಕಾರ್ಯಕ್ರಮದಲ್ಲಿ‌ ನಮ್ಮ ಕುಂದುಕೊರತೆಗಳನ್ನು ಸರ್ಕಾರದ‌ ಮುಂದಿಡಲಾಗುವುದು ಎಂದು ಹೇಳಿದರು.

ಸಿಆರ್ ಪಿಎಫ್ ನಲ್ಲಿ ರಾಜ್ಯದ 40 ಸಾವಿರಕ್ಕೂ ಹೆಚ್ಚು ಯೋಧರು ಕಾರ್ಯನಿರ್ವಹಿಸುತ್ತಿದ್ದಾರೆ. 15 ಸಾವಿರ ನಿವೃತ್ತ ಯೋಧರು ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಯಲಹಂಕದ ಸಿಆರ್ ಪಿಎಫ್ ಗ್ರೂಪ್ ಸೆಂಟರ್ ನಲ್ಲಿ ಕರ್ನಾಟಕದ 1500 ಯೋಧರು ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ರೋಹ, ನಕ್ಸಲಿಸಂ, ಕೋಮುದಳ್ಳುರಿ, ಬಂದ್, ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ದೇಶದ ಆಂತರಿಕ ಸುರಕ್ಷತೆಯಲ್ಲಿ ಸಿಆರ್ ಪಿಎಫ್ ತೊಡಗಿಸಿಕೊಂಡಿದೆ. ನಮ್ಮವರ ಸೇವೆಯನ್ನು ದೇಶಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ನಿವೃತ್ತ ಯೋಧರ ಸಂಘ ಕಾರ್ಯನಿರ್ವಹಿಸುತ್ತಿದೆ ಎಂದರು.

ಈ ಹಿಂದೆ ಕರ್ನಾಟಕ ಸರ್ಕಾರ ಸೈನಿಕ ಮಂಡಳಿ ಆರಂಭಿಸಿತ್ತು. ಆದರೆ, ಈಗ ನಿಂತು ಹೋಗಿದೆ. ಮತ್ತರ ಸೈನಿಕ ಮಂಡಳಿ ಆರಂಭಿಸಬೇಕೆಂಬ ದೊಡ್ಡ ಬೇಡಿಕೆ ನಿವೃತ್ತ ಯೋಧರದ್ದಾಗಿದೆ ಎಂದು ಹೇಳಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಅನಂತರಾಜಗೋಪಾಲ್ ಮಾತನಾಡಿ, ಸಿಆರ್ಪಿಎಫ್ ಯೋಧರು ಹಾಗೂ ನಿವೃತ್ತ ಯೋಧರು ಮೂಲಭೂತ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಸೇವಾ ಕಠಿಣತೆಯಲ್ಲೂ ಕಾರ್ಯನಿರ್ವಹಿಸುತ್ತಿರುವ ಯೋಧರಿಗೆ ಪಿಂಚಣಿ ವ್ಯವಸ್ಥೆ ಇಲ್ಲ. ಭಾರತೀಯ ಸೇನಾ ಪಡೆಗಳಂತೆ ನಮ್ಮನ್ನು ಪರಿಗಣಿಸುತ್ತಿಲ್ಲ ಎಂದು ಹೇಳಿದರು.

ಗೋಷ್ಠಿಯಲ್ಲಿ ಕರ್ನಾಟಕ‌ ಅರೆಸೇನಾ ಪಡೆಗಳ‌ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ, ಗೌರವಾಧ್ಯಕ್ಷ ಶಿವರಾಂ ಸೇರಿದಂತೆ ಇತರೆ ನಿವೃತ್ತ ಯೋಧರು ಹಾಜರಿದ್ದರು.

Leave a Reply

Your email address will not be published. Required fields are marked *