ತಾಲೂಕಿನ ಮೇಲಿನನಾಯಕರಂಡನಹಳ್ಳಿ ಗ್ರಾಮದಲ್ಲಿ ಮೇಕೆ, ಕುರಿ ಕಳ್ಳರ ಹಾವಳಿ ಹೆಚ್ಚಾಗಿದೆ. ಮೇಕೆ, ಕುರಿ ಕಳ್ಳರ ಉಪಟಳದಿಂದ ಅಪಾರ ನಷ್ಟಕ್ಕೆ ಗ್ರಾಮಸ್ಥರು ಒಳಗಾಗುತ್ತಿದ್ದಾರೆ. ಕಳ್ಳರು ರಾತ್ರೋರಾತ್ರಿ ಕುರಿ, ಮೇಕೆ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದಾರೆ.ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಕುರಿ ಮೇಕೆ ಕಳ್ಳರ ಹಾವಳಿ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಮೊದಲ ದಿನ ನಾಲ್ಕು ಮೇಕೆಗಳನ್ನ ಕದ್ದೊಯ್ದ ಕಳ್ಳರು, ಮರುದಿನ ಮತ್ತು ನಿನ್ನೆ ರಾತ್ರಿ ಮತ್ತೆ ಗ್ರಾಮಕ್ಕೆ ದಾಳಿ ಇಟ್ಟು ಕಳ್ಳತನ ಯತ್ನ ನಡೆಸಿದ್ದಾರೆ.
ಮೂರು ದಿನಗಳ ಹಿಂದೆಯಷ್ಟೇ ಗ್ರಾಮದಲ್ಲಿ ಮೇಕೆಗಳ ಕಳ್ಳತನ ಪ್ರಕರಣ ನಡೆದಿದ್ದು, ಗ್ರಾಮದ ನರಸಪ್ಪ ಎಂಬುವವರ ಮೇಕೆ ದೊಡ್ಡಿಯ ಬಾಗಿಲಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ನಾಲ್ಕು ಮೇಕೆಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ, ಘಟನೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಘಟನೆಯಾದ ಮರುದಿನ ಸಹ ಗ್ರಾಮಕ್ಕೆ ಕಳ್ಳರು ದಾಳಿ ನಡೆಸಿದ್ದಾರೆ. ತೋಟದಲ್ಲಿನ ಮೇಕೆ ಸಾಕಾಣಿಕೆಯ ಶೆಡ್ಡಿಗೆ ಕಳ್ಳರು ನುಗ್ಗಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಎಚ್ಚೇತ್ತ ಗ್ರಾಮಸ್ಥರು ಮಚ್ಚು, ದೊಣ್ಣೆಗಳಿಂದ ಹಲ್ಲೆಗೆ ಮುಂದಾಗುತ್ತಿದ್ದಂತೆ ಕಳ್ಳರು ಪರಾರಿಯಾಗಿದ್ದರು.
ನಿನ್ನೆ ರಾತ್ರಿಯು ಸಹ ಗ್ರಾಮಕ್ಕೆ ಕಳ್ಳರು ಬಂದಿದ್ದಾರೆ, ಗ್ರಾಮದ ಅಂಚಿನ ಶಶಿಕುಮಾರ್ ರವರ ಮೇಕೆ ದೊಡ್ಡಿಗೆ ಕಳ್ಳರು ನುಗ್ಗಿದ್ದಾರೆ, ಬಾಗಿಲಿನ ಬೀಗಿ ಹೊಡೆಯುತ್ತಿದ್ದ ಶಬ್ದಕ್ಕೆ ಶಶಿಕುಮಾರ್ ಮನೆಯಿಂದ ಹೊರಬರುತ್ತಿದ್ದಂತೆ ಕಳ್ಳರು ಇನೋವಾ ಕಾರಿನಲ್ಲಿ ಪರಾರಿಯಾಗಿದ್ದಾರೆ. ಕಾರಿಗೆ ಯಾವುದೇ ರೀತಿಯ ನಂಬರ್ ಪ್ಲೇಟ್ ಇರಲಿಲ್ಲ, ಗುರುತು ಸಿಗದ ರೀತಿಯಲ್ಲಿ ಮುಖವನ್ನ ಬಟ್ಟೆಯಿಂದ ಸುತ್ತಿಕೊಂಡಿದ್ದರು ಮತ್ತು ಮಧ್ಯ ರಾತ್ರಿ 12 ಗಂಟೆಯಿಂದ ಮುಂಜಾನೆ 3 ಗಂಟೆಯ ನಡುವೆ ಗ್ರಾಮಕ್ಕೆ ಕಳ್ಳರು ನುಗ್ಗುತ್ತಿದ್ದಾರೆಂದು ಗ್ರಾಮಸ್ಥರು ತಮ್ಮ ಆತಂಕವನ್ನ ವ್ಯಕ್ತಪಡಿಸುತ್ತಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಆರು ತಿಂಗಳಿದ ಈಚೆಗೆ ವಿವಿಧ ಗ್ರಾಮಗಳಲ್ಲಿ ಕುರಿ, ಮೇಕೆ, ರಾಸುಗಳ ಕಳವು ಪ್ರಕರಣಗಳು ನಡೆಯುತ್ತಲೇ ಇವೆ. ಆದರೆ ಇದುವರೆಗೂ ಒಂದೇ ಒಂದು ಪ್ರಕಣದಲ್ಲೂ ಕಳ್ಳರು ಪತ್ತೆಯಾಗಿಲ್ಲ. ಇದರಿಂದ ರೈತರು ಆತಂಕದಲ್ಲಿಯೇ ರಾತ್ರಿ ಕಳೆಯುವಂತೆ ಮಾಡಿದೆ.