ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ: ತೂಬಗೆರೆಯಲ್ಲಿ ಅದ್ಧೂರಿ ಸೀತಾರಾಮ ಕಲ್ಯಾಣೋತ್ಸವ

ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ತಾಲೂಕಿನ ತೂಬಗೆರೆ ಶ್ರೀಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ರಾಮ ಭಕ್ತರು ಸೀತಾರಾಮ ಕಲ್ಯಾಣೋತ್ಸವ ನೆರವೇರಿಸಿದರು. ದೇವಾಲಯದ ಮುಂಭಾಗ ಶ್ರೀರಾಮ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಹಾಗೂ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಹೋಬಳಿ ಕೇಂದ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬಸ್ ನಿಲ್ದಾಣದಲ್ಲಿ ಶ್ರೀರಾಮ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಿ, ಭಕ್ತರಿಗೆ ಪಾನಕ,ಮಜ್ಜಿಗೆ ಹಾಗೂ ಕೋಸಂಬರಿ ವಿತರಣೆ ಮಾಡಲಾಗಿದೆ. ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಶ್ರೀತಾಮ ಕಲ್ಯಾಣೋತ್ಸವ ಜರುಗಿಸಲಾಗಿದೆ ಎಂದು ಬಿಜೆಪಿ‌ ಮುಖಂಡ ಹಾಗೂ ವಕೀಲ ಪ್ರತಾಪ್ ತಿಳಿಸಿದರು.

ಶತಮಾನಗಳ ಸುದೀರ್ಘ ಕಾಯುವಿಕೆ ಬಳಿಕ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಮಾಡಲಾಗಿದೆ. ದೇಶದ ಜನತೆಗೆ ಶ್ರೀರಾಮ ಒಳ್ಳೆಯದು ಮಾಡಲಿ, ಸುಖ:, ಶಾಂತಿ, ನೆಮ್ಮದಿ ನೀಡಲಿ ಎಂದು ಪ್ರಾರ್ಥನೆ ಮಾಡಲಾಗಿದೆ ಎಂದು ಹೇಳಿದರು.

ಬಿಜೆಪಿ ಮುಖಂಡ ಕೃಷ್ಣಪ್ಪ(ಕಿಟ್ಟಿ) ಮಾತನಾಡಿ, ಪ್ರತಿಯೊಬ್ಬರಲ್ಲೂ ಶ್ರೀರಾಮನ ಸಂಭ್ರಮವು ಮನೆ ಮಾಡಿದೆ. ನಮ್ಮ ರಾಮ ನಮ್ಮ ಮನೆಗೆ ಬಂದಿದ್ದಾರೆಂಬ ಭಾವನೆ ಜನರಲ್ಲಿದೆ. ಈ ಮೂಲಕ ಎಲ್ಲರ ಮನೆ ಮನಗಳಲ್ಲಿ ರಾಮ ವಿಜೃಂಭಿಸುತ್ತಿದ್ದಾನೆ. ಕಳೆದ 500 ವರ್ಷಗಳಿಂದ ಮಾಡಿದ ಹೋರಾಟವು ಇವತ್ತು ಸಾರ್ಥಕವಾಗಿದೆ ಎಂದರು.

ಈ ವೇಳೆ ರಾಮನ ಭಕ್ತರು, ಊರಿನ ಗ್ರಾಮಸ್ಥರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *