ಫೆ.25 ಹಾಗೂ‌ ಫೆ.26ರಂದು 13ನೇ ಕನ್ನಡ ಸಾಹಿತ್ಯ ಸಮ್ಮೇಳನ

ದೊಡ್ಡಬಳ್ಳಾಪುರ ತಾಲ್ಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನವು ಫೆ.25 ಹಾಗೂ‌ ಫೆ.26ರಂದು ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆಯಲಿದೆ.

ಜನವರಿ 21 ಮತ್ತು 22ರಂದು ನಡೆಯಬೇಕಾಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿಧಾನಪರಿಷತ್ತು ಉಪ ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.

ಈಗಾಗಲೇ ದೊಡ್ಡಬಳ್ಳಾಪುರ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರುಗಳಿಗೆ ಆಹ್ವಾನ ಪತ್ರಿಕೆಯನ್ನು   ಅಂಚೆಯ ಮೂಲಕ ಕಳುಹಿಸಲಾಗಿತ್ತು. ಬದಲಾಗಿರುವ ಸಮ್ಮೇಳನ ದಿನಾಂಕದಂದು ಕನ್ನಡ ಸಾಹಿತ್ಯ ಪರಿಷತ್ತು  ಸದಸ್ಯರು, ಕನ್ನಡಾಭಿಮಾನಿಗಳು ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆಯುವ   ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಬೇಕೆಂದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಪಿ.ಗೋವಿಂದರಾಜು ವಿನಂತಿಸಿಕೊಂಡಿದ್ದಾರೆ.

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕರ್ನಾಟಕ ಸರ್ಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ಜನಪ್ರಿಯ ವೈದ್ಯರಾದ ದೊಡ್ಡತುಮಕೂರು ಗ್ರಾಮದವರಾದ ಡಾ.ಟಿ.ಎಚ್.ಆಂಜನಪ್ಪನವರು ಸಮ್ಮೇಳನ ಅಧ್ಯಕ್ಷರಾಗಿದ್ದಾರೆ.

ಫೆ.25ರ ಭಾನುವಾರ ಸಮ್ಮೇಳನದ ಮೊದಲ ದಿನ ಧ್ವಜಾರೋಹಣ, ಸಮ್ಮೇಳನ ಅಧ್ಯಕ್ಷರ ಮೆರವಣಿಗೆ,  ಸಮ್ಮೇಳನ ಉದ್ಘಾಟನೆ, ವಿಚಾರಗೋಷ್ಠಿ, ಯುವಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಫೆ.26ರಂದು ಮಕ್ಕಳ ಗೋಷ್ಠಿ, ಮಹಿಳಾಗೋಷ್ಠಿ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಮಾರೋಪ ಸಮಾರಂಭ ನಡೆಯಲಿದೆ.

ಸಮ್ಮೇಳನ ಅಧ್ಯಕ್ಷರ ಪರಿಚಯ

ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡತುಮಕೂರು ಗ್ರಾಮದ ಹನುಮಂತರಾಯಪ್ಪ ಮತ್ತು ಲಕ್ಷ್ಮಿದೇವಮ್ಮ ದಂಪತಿಗಳಾದ ಮಗನಾದ ಡಾ.ಟಿ.ಎಚ್.ಆಂಜನಪ್ಪನವರು ಪ್ರಾಥಮಿಕ ಶಿಕ್ಷಣವನ್ನು ದೊಡ್ಡತುಮಕೂರು ಗ್ರಾಮದಲ್ಲಿ, ಪ್ರೌಢಶಿಕ್ಷಣವನ್ನು ದೊಡ್ಡಬಳ್ಳಾಪುರದಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಬೆಂಗಳೂರಿನಲ್ಲಿ, ವೈದ್ಯಕೀಯ ಶಿಕ್ಷಣವನ್ನು ಬಳ್ಳಾರಿ ಮತ್ತು ಹುಬ್ಬಳ್ಳಿಯಲ್ಲಿ ಮಾಡಿದರು. ಹಲವಾರು ಪ್ರತಿಷ್ಠಿತ ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಾ, ಜನಸಾಮಾನ್ಯರಿಗೆ ಆರೋಗ್ಯ ಜಾಗೃತಿಯನ್ನು ಕನ್ನಡ ಭಾಷೆಯಲ್ಲಿ ಮೂಡಿಸುತ್ತಾ ಬಂದಿದ್ದಾರೆ.

ತಮ್ಮ ಹಾಸ್ಯಭರಿತ ಕನ್ನಡ ಭಾಷಣದ ಮೂಲಕ ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನ ನೀಡಿದ್ದಾರೆ. ಕನ್ನಡ ವೈದ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಜೊತೆಗೆ ಹಲವಾರು ವೈದ್ಯಕೀಯ ಲೇಖನಗಳನ್ನು ಕನ್ನಡ ಭಾಷೆಯಲ್ಲಿ ಬರೆದಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ  ಕರ್ನಾಟಕ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಲಂಡನ್ ಪತ್ರಿಕಾ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಡಾ.ಬಿ.ಸಿ.ರಾಯ್ ಪ್ರಶಸ್ತಿ ಸೇರಿದಂತೆ 50 ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಪ್ರಶಸ್ತಿ ಮತ್ತು ಪುರಸ್ಕಾರ ಮಾಡಿವೆ.   ದೂರದರ್ಶನ ವಾಹಿನಿಗಳು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಭಾಷೆಯಲ್ಲಿ ಆರೋಗ್ಯ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.

Leave a Reply

Your email address will not be published. Required fields are marked *