ರಾಂಚಿ : ಏಕದಿನ ಸರಣಿಯಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸಿರುವ ಭಾರತ ತಂಡ ಶುಕ್ರವಾರ ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣ ರಾಂಚಿಯಲ್ಲಿ ನಡೆಯುವ ಮೂರು ಪಂದ್ಯಗಳ ಟಿ-ಟ್ವೆಂಟಿ ಸರಣಿಯ ಮೊದಲ ಪಂದ್ಯ ಗೆಲ್ಲುವ ಮೂಲಕ ಹಾರ್ದಿಕ್ ಪಡೆ ಶುಭಾರಂಭ ಮಾಡುವ ನಿರೀಕ್ಷೆಯಿದೆ.
ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾ ಹಾಗೂ ಅನುಭವಿ ಆಟಗಾರ ಕೆ. ಎಲ್. ರಾಹುಲ್ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ, ವರ್ಷದ ಆರಂಭದಲ್ಲಿ ಶ್ರೀಲಂಕಾ ವಿರುದ್ಧ ಟಿ-ಟ್ವೆಂಟಿ ಸರಣಿ ಜಯಿಸುವ ಮೂಲಕ ಹೊಸ ಭರವಸೆ ಮೂಡಿಸಿದ್ದು ನ್ಯೂಜಿಲೆಂಡ್ ವಿರುದ್ಧ ಅದನ್ನೇ ಮುಂದುವರಿಸುವ ವಿಶ್ವಾಸವಿದೆ.
ಆರಂಭಿಕ ಆಟಗಾರರು ಸೇರಿದಂತೆ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗ ಅದ್ಬುತವಾದ ಪ್ರದರ್ಶನ ನೀಡುತ್ತಿದೆ, ಈಗಾಗಲೇ ಪ್ರವಾಸಿ ತಂಡದ ವಿರುದ್ಧ ಏಕದಿನ ಸರಣಿ ಜಯಿಸಿದ್ದು ತಂಡದ ವಿಶ್ವಾಸವನ್ನು ಹೆಚ್ಚಿಸಿದೆ.
ಯುವ ಆಟಗಾರರ ದಂಡನ್ನೇ ಕಟ್ಟಿರುವ ಆಯ್ಕೆ ಸಮಿತಿ ಮತ್ತೊಮ್ಮೆ ಯುವಕರ ಮೇಲೆ ವಿಶ್ವಾಸವಿಟ್ಟು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದೆ, ಉತ್ತಮವಾದ ಅವಕಾಶ ಸಿಕ್ಕಿದ್ದು ಯುವ ಪಡೆ ತಮ್ಮ ಶಕ್ತಿ ಸಾಮರ್ಥ್ಯವನ್ನು ಸಾಬೀತು ಪಡಿಸಲು ಇದೊಂದು ಉತ್ತಮ ವೇದಿಕೆಯಾಗಿದೆ.
ಆರಂಭಿಕ ಆಟಗಾರರಾಗಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ಹಾಗೂ ಶುಭಮನ್ ಗಿಲ್ ಮಿಂಚುವ ವಿಶ್ವಾಸವಿದೆ, ಮದ್ಯಮ ಕ್ರಮಾಂಕದಲ್ಲಿ ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಬಲ ತುಂಬಲಿದ್ದು ಉಮ್ರಾನ್ ಮಲ್ಲಿಕ್, ಅಶ೯ದೀಪ್ ಸಿಂಗ್, ಶಿವಮ್ ಮಾವಿ ಹಾಗೂ ಚಹಲ್ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇದೆ.
ಪ್ರವಾಸಿ ತಂಡ ಸ್ಯಾಂಟ್ನರ್ ಅವರ ನಾಯಕತ್ವದಲ್ಲಿ ಮೈದಾನಕ್ಕೆ ಇಳಿಯಲಿದ್ದು ಏಕದಿನ ಸರಣಿಯಲ್ಲಿನ ಸೋಲನ್ನು ಮರೆಯಲು ಪಂದ್ಯ ಗೆಲ್ಲುವ ಉತ್ಸಾಹದಲ್ಲಿದೆ, ಆರಂಭಿಕ ಬ್ಯಾಟ್ಸ್ಮನ್ ಕಾನ್ವೆ, ಫಿನ್ ಅಲೆನ್, ಫಿಲಿಪ್, ಬ್ರೆಸ್ವೆಲ್ ಮಿಂಚುವಂತ ಆಟಗಾರರಾಗಿದ್ದು ತಿರುಗೇಟು ನೀಡಲಿದ್ದಾರೆ.
ಈಗಾಗಲೇ ಅಭ್ಯಾಸ ಆರಂಭಿಸಿರುವ ಎರಡೂ ತಂಡಗಳಿಂದ ಉತ್ತಮ ಪೈಪೋಟಿ ನಿರೀಕ್ಷಿಸಲಾಗಿದೆ, ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ದೋನಿ ಅವರ ತವರೂರಿನಲ್ಲಿ ನಡೆಯುತ್ತಿರುವುದರಿಂದ ಕ್ಯಾಪ್ಟನ್ ಕೂಲ್ ಭಾರತ ತಂಡದ ಡ್ರೆಸಿಂಗ್ ಕೋಣೆಗೆ ತೆರಳಿ ಆಟಗಾರರಿಗೆ ಕೆಲವು ಸಲಹೆ ನೀಡಿದ್ದಾರೆ, ಪಂದ್ಯ 7.30 ಕ್ಕೆ ಪ್ರಾರಂಭವಾಗಲಿದ್ದು ಅಭಿಮಾನಿಗಳು ಕಾತರದಿಂದ ಎದುರುನೋಡುತ್ತಿದ್ದಾರೆ.