ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 50-60 ವರ್ಷಗಳಿಂದಲೂ ಹಿಡುವಳಿ ಜಮೀನುಗಳ ಖಾತೆದಾರರು ನಿಧನ ಹೊಂದಿದ್ದರೂ ಸಹ ವಾರಸುದಾರರಿಗೆ ಖಾತೆಯಾಗದೇ ಹಾಗೇ ಇದೆ. ಈ ಹಿನ್ನೆಲೆ ಕಂದಾಯ ಇಲಾಖಾ ವತಿಯಿಂದ ಫವತಿ ವಾರಸು ಖಾತೆ ವಿಶೇಷ ಆಂದೋಲನವನ್ನ ಹಮ್ಮಿಕೊಳ್ಳಲಾಗಿದೆ. ಬಾಕಿ ಇರುವ ಎಲ್ಲಾ ಫವತಿ ಖಾತೆ ಪ್ರಕರಣಗಳನ್ನು ವಿಲೇವಾರಿ ಮಾಡಲು ಜನವರಿ 05 ರಿಂದ ಫೆಬ್ರವರಿ 05ರ ವರೆಗೆ ಅವಕಾಶ ಮಾಡಲಾಗಿದೆ ಎಂದು ಶಾಸಕ ಧೀರಜ್ ಹೇಳಿದರು.
ತಾಲೂಕಿನಲ್ಲಿ ಸುಮಾರು 11 ಸಾವಿರ ಫವತಿ ಖಾತೆಯಾಗದೆ ಇರುವ ಹಕ್ಕುದಾರರು ಸರ್ಕಾರದ ಮಹತ್ವ ಯೋಜನೆಗಳಾದ ಪಿ.ಎಂ.ಕಿಸಾನ್ ಯೋಜನೆ, ಬರ, ಅತಿವೃಷ್ಟಿ ಪರಿಹಾರ ಹಾಗೂ ಇನ್ನುಳಿದ ಸರ್ಕಾರದ ಯಾವುದೇ ಯೋಜನೆಗಳ ಸವಲತ್ತುಗಳನ್ನು ಪಡೆಯಲು ರೈತರಿಗೆ ಸಾಧ್ಯವಾಗದೇ ಆರ್ಥಿಕ ನಷ್ಟವನ್ನು ಅನುಭವಿಸುತ್ತಿರುತ್ತಾರೆ. ಸರ್ಕಾರದ ಸವಲತ್ತು ಪಡೆಯಲು ರೈತರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪ್ರತಿ ನಾಡಕಚೇರಿ ವ್ಯಾಪ್ತಿಯ ಕೇಂದ್ರ ಸ್ಥಾನದಲ್ಲಿ ಫವತಿ ವಾರಸು ಖಾತೆ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.
ನಂತರ ತಹಶೀಲ್ದಾರ್ ವಿಭಾ ವಿದ್ಯಾ ರಾಠೋಡ್ ಮಾತನಾಡಿ, ಖಾತೆ ಬದಲಾವಣೆಗೆ ಅರ್ಜಿಯೊಂದಿಗೆ ಅರ್ಜಿದಾರರ ಆಧಾರ್ ಕಾರ್ಡ್ (ನೀಡಲು ಒಪ್ಪಿದಲ್ಲಿ), ಗಣಕೀಕೃತ ವಂಶವೃಕ್ಷ, ಮರಣ ಪ್ರಮಾಣ ಪತ್ರ, ಪ್ರಮಾಣ ಪತ್ರ ( affidavit) ಇನ್ನಿತರೆ ದಾಖಲಾತಿಗಳು (ಅಗತ್ಯವಿದ್ದಲ್ಲಿ) ಸಲ್ಲಿಸಬೇಕು ಎಂದರು.
ರೈತರು ದಾಖಲಾತಿಗಳೊಂದಿಗೆ ಸಂಬಂಧಿಸಿದ ತಹಶೀಲ್ದಾರ್, ಗ್ರೇಡ್-2 ತಹಶೀಲ್ದಾರ್, ಉಪತಹಶೀಲ್ದಾರ್, ರಾಜಸ್ವ ನಿರೀಕ್ಷಕರು ಅಥವಾ ಗ್ರಾಮ ಆಡಳಿತಾಧಿಕಾರಿಗಳನ್ನು ಸಂಪರ್ಕಿಸುವ ಮೂಲಕ ಸದುಪಯೋಗ ಪಡೆದುಕೊಳ್ಳಲು ಎಂದು ತಿಳಿಸಿದರು.
ನಂತರ ತಾಲೂಕು ಕಚೇರಿಯ ವಿವಿಧ ಇಲಾಖಾ ಕೌಂಟರ್ ಗಳಿಗೆ ದಿಢೀರ್ ಅಧಿಕಾರಿಗಳ ಕಾರ್ಯವೈಖರಿ ವಿಕ್ಷಣೆ ಮಾಡಿದರು. ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ವಿತರಣೆಗೆ ಪ್ರತ್ಯೇಕ ಕೌಂಟರ್ ತೆಗೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದರು.