2024ರ ಹೊಸವರ್ಷದ ಸಂಭ್ರಮಾಚರಣೆ: ಮಾದಕ ವಸ್ತು ಹೆಚ್ಚಿನ ಬೆಲೆಗೆ ಮಾರಾಟ ಆರೋಪ:1.54 ಕೆಜಿ ಗಾಂಜಾ ಜಪ್ತಿ

2024ರ ಹೊಸವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ, ಮಾದಕ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದ್ದ ಡ್ರಗ್ ಪೆಡ್ಲರ್‌ನ್ನು ಬೆಂಗಳೂರು ನಗರ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಯು ಪತ್ತೆ ಹಚ್ಚಿ ಬಂಧಿಸಿದ್ದಾರೆ, 8,40,000 ಮೌಲ್ಯದ ನಿಷೇಧಿತ ಮಾದಕ ವಸ್ತುಗಳಾದ ಎಂ.ಡಿ.ಎಂ.ಎ 25g, 30 ಎಕ್ಸ್‌ಟಿಸಿ ಮಾತ್ರೆಗಳು ಹಾಗೂ ಸ್ಥಳೀಯ ಡ್ರಗ್‌ ಡೀಲರ್‌ ಗಳಿಂದ ಪಡೆದುಕೊಂಡಿದ್ದ ಎನ್ನಲಾಗಿದೆ. 1.54 ಕೆಜಿ ಗಾಂಜಾವನ್ನು  ವಶಕ್ಕೆ ಪಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತರಾದ ಬಿ‌.ದಯಾನಂದ್ ಅವರು ತಿಳಿಸಿದ್ದಾರೆ.

ಲೋಕಾಯುಕ್ತ ಅಧಿಕಾರಿ ಎಂದು ಹೇಳಿಕೊಂಡು ಸರ್ಕಾರಿ ಅಧಿಕಾರಿಗಳಿಂದ ಹಣ ವಸೂಲಿ ಮಾಡಿ ವಂಚಿಸಲು ಯತ್ನಿಸಿರುವ ಆರೋಪದ ಮೇಲೆ ಓರ್ವನನ್ನು ಬೆಂಗಳೂರು ನಗರ ಅಪರಾಧ ನಿಯಂತ್ರಣ ದಳ ತಂಡದ ಪೊಲೀಸರು  ಬಂಧಿಸಿದ್ದಾರೆ. ಆರೋಪಿಯು, ಮೂಲತಃ ಆಂಧ್ರಪ್ರದೇಶದವನಾಗಿದ್ದು, ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿಟ್ಟುಕೊಂಡು ದಾಖಲಾಗಿರುವ ಪ್ರಕರಣಗಳನ್ನು ಮುಚ್ಚಲು ಹಣ ನೀಡಬೇಕಾಗುತ್ತದೆ ಎಂದು ಬೇಡಿಕೆ ಇಟ್ಟು ಹಣ ಪಾವತಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದನು.

ಈತನು ಈ ಹಿಂದೆ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಾದ್ಯಂತ  ಸಹ ಸರ್ಕಾರಿ ನೌಕರರಿಗೆ 35ಕ್ಕೂ ಹೆಚ್ಚು ಇದೇ ರೀತಿ ಕರೆ ಮಾಡಿ, ಬೆದರಿಸಿ ಹಣ ವಸೂಲಿ ಮಾಡಿರುವುದು ತನಿಖೆ ವೇಳೆ ತಿಳಿದು ಬಂದಿರುತ್ತದೆ. ಇದರ ಹಿನ್ನೆಲೆಯಲ್ಲಿ, ಈ ರೀತಿಯ ಹಗರಣಕ್ಕೆ ಬಲಿಯಾಗಿರಬಹುದಾದ ವ್ಯಕ್ತಿಗಳು ಮುಂದೆ ಬಂದು  ದೂರುಗಳೊಂದಿಗೆ ಪ್ರಕರಣವನ್ನು ತಕ್ಷಣವೇ   ದಾಖಲಿಸುವಂತೆ ಬೆಂಗಳೂರು ನಗರ ಪೊಲೀಸರು  ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸಾರ್ವಜನಿಕರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಅವರಿಂದ ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡಲು ಪ್ರಯತ್ನಿಸುತ್ತಿದ್ದ 06 ಜನರನ್ನು ಹಾಗೂ ಅರೋಪಿಗಳಿಂದ 06 ಮಾರಕಾಸ್ತ್ರಗಳು ಮತ್ತು ಕೃತ್ಯಕ್ಕೆ ಉಪಯೋಗಿಸಿದ 03 ಬೈಕ್‌ಗಳನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿರುತ್ತಾರೆ.

ಆರೋಪಿತರ ಪೈಕಿ ಒಬ್ಬ ಆರೋಪಿಯ ವಿರುದ್ಧ 2018ರಲ್ಲಿ ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಡಕಾಯತಿ ಪ್ರಕರಣ ದಾಖಲಾಗಿರುತ್ತದೆ. ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡಲು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *