ದೊಡ್ಡಬಳ್ಳಾಪುರ: ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗುವ ಮುಖ್ಯ ರಸ್ತೆಯ ಹಾಡೋನಹಳ್ಳಿ ಗ್ರಾಮದಲ್ಲಿ ಎಂ.ಎಸ್.ಐ.ಎಲ್. ವತಿಯಿಂದ ಮದ್ಯದ ಅಂಗಡಿ ತರೆಯಲು ಅನುಮತಿ ನೀಡಲು ಮುಂದಾಗಿರುವ ಅಬಕಾರಿ ಇಲಾಖೆಯ ಕ್ರಮಕ್ಕೆ ಸ್ಥಳೀಯ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರುವ ಘಾಟಿ ಕ್ಷೇತ್ರದ ರಸ್ತೆಯಲ್ಲೇ ಇರುವ ಹಾಡೋನಹಳ್ಳಿ ಗ್ರಾಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ತರಬೇತಿ ಕೇಂದ್ರವು ಇದೆ. ಇಲ್ಲಿನ ತರಬೇತಿ ಕೇಂದ್ರಕ್ಕೆ ಜಿಲ್ಲೆಯ ನಾಲ್ಕು ತಾಲ್ಲೂಕುಗಳಿಂದಲು ರೈತರು ವಿವಿಧ ಆಧುನಿಕ ಕೃಷಿ ಪದ್ದತಿಗಳ ಹಾಗೂ ಸರ್ಕಾರದ ಯೋಜನೆಗಳ ಕುರಿತಂತೆ ತರಬೇತಿಗಳನ್ನು ಪಡೆಯಲು ಪುರುಷರು, ಮಹಿಳೆಯರು ಬರುತ್ತಾರೆ.
ಇಂತಹ ಪ್ರಮುಖ ಗ್ರಾಮದಲ್ಲಿ ಮದ್ಯದ ಅಂಗಡಿಯನ್ನು ತರೆಯಲು ಮುಂದಾಗಿರುವ ಕ್ರಮ ಖಂಡನೀಯ ಎಂದು ತಿಳಿಸಿರುವ ಹಾಡೋನಹಳ್ಳಿ ಗ್ರಾಮದ ಮುಖಂಡ ಎಂ.ಮುನೇಗೌಡ, ಈ ಬಗ್ಗೆ ಹಲವಾರು ಬಾರಿ ಗ್ರಾಮಸ್ಥರು ಲಿಖಿತವಾಗಿ ಮನವಿಗಳನ್ನು ನೀಡಿದ್ದರು ಸಹ ಅಬಕಾರಿ ಇಲಾಖೆ ಅಧಿಕಾರಿಗಳು ಲಾಭಿಗೆ ಮಣಿದು ಗಮನವಹಿಸದೇ ಮದ್ಯದ ಅಂಗಡಿ ತೆರಯಲು ಅನುಮತಿ ನೀಡಲು ಮುಂದಾದರೆ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.