ದೇವಾಲಯದ ಪ್ರಸಾದ ತಿಂದು ಆಸ್ಪತ್ರೆ ಪಾಲಾದ ಭಕ್ತರು? ತೀವ್ರ ಅಸ್ವಸ್ಥಗೊಂಡಿದ್ದ ಓರ್ವ ಮಹಿಳೆ ಸಾವು: ಫುಡ್ ಪಾಯಿಸನ್ ಮಹಿಳೆ ಸಾವಿಗೆ ಕಾರಣವಾಯ್ತಾ? 

ನಿನ್ನೆ ಹನುಮ ಜಯಂತಿ, ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ದೇಗುಲಗಳಿಗೆ ಭೇಟಿ ನೀಡಿ‌ ಪ್ರಸಾದ ಸೇವಿಸಿದ್ದ ನೂರಾರು ಭಕ್ತರಿಗೆ ವಾಂತಿ, ಭೇದಿಯಾಗಿ ಅಸ್ವಸ್ಥಗೊಂಡಿದ್ದು, ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ಹೊಸಕೋಟೆ ನಗರದಲ್ಲಿ ನಡೆದಿದೆ.

ವಾಂತಿ ಭೇದಿಯಿಂದ ಬಳಲುತ್ತಿದ್ದ ಸಿದ್ದಗಂಗಮ್ಮ(65) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಹೊಸಕೋಟೆ ನಗರದ ವೆಂಕಟರಮಣಸ್ವಾಮಿ, ಊರುಬಾಗಿಲು ಆಂಜನೇಯ ಸ್ವಾಮಿ, ಕೋಟೆ ಆಂಜನೇಯ ಸ್ವಾಮಿ ಇತ್ಯಾದಿ ದೇವಾಲಯಗಳಲ್ಲಿ ಪುಳಿಯೊಗರೆ, ಪಾಯಸ, ಲಡ್ಡು ಸೇವನೆ ಮಾಡಿದ್ದ ಭಕ್ತರು ಅಸ್ವಸ್ಥಗೊಂಡಿದ್ದಾರೆ ಎಂದು ಸ್ಥಳೀಯರಿಂದ ಮಾಹಿತಿ ಒದಗಿಬಂದಿದೆ. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನಿನ್ನೆ ರಾತ್ರಿಯಿಂದಲೇ ಹೊಸಕೋಟೆ ಖಾಸಗಿ ಆಸ್ಪತ್ರೆ, ಕೋಲಾರ, ಬೆಂಗಳೂರು ಆಸ್ಪತ್ರೆಗಳಲ್ಲಿ ಅಸ್ವಸ್ತಗೊಂಡ ಭಕ್ತರಿಗೆ ತೀವ್ರ‌ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಫುಡ್ ಪಾಯಿಸನ್ ಮಹಿಳೆ ಸಾವಿಗೆ ಕಾರಣವಾ?ಎಂಬುದರ ಬಗ್ಗೆ ವರದಿ ಬಂದ ಮೇಲೆ ಖಚಿತಪಡಿಸುವುದಾಗಿ ವೈದ್ಯರು ಹೇಳಿದ್ದಾರೆ.

Leave a Reply

Your email address will not be published. Required fields are marked *