ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಯ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಹೆಚ್ಚಳವನ್ನು ವಿರೋಧಿಸುವುದರ ಜೊತೆಗೆ ಕೂಡಲೇ ಶುಲ್ಕ ಹೆಚ್ಚಳ ಆದೇಶವನ್ನು ವಾಪಸ್ ಪಡೆಯುವಂತೆ ಎಸ್‌ಎಫ್‌ಐ ಸಂಘಟನೆಯಿಂದ ವಿವಿ ಪ್ರಭಾರಿ ಕುಲಪತಿ ಪ್ರೊ. ಕುಮದಾ ಅವರಿಗೆ ಮನವಿ ನೀಡಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಅಂಬ್ಲಿಕಲ್ ಶಿವಪ್ಪ ಮಾತನಾಡಿ, ಕಳೆದ ವರ್ಷ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪ್ರವೇಶ ಶುಲ್ಕವು ಎಸ್ಸಿ ಎಸ್ಟಿಗೆ 335 ರೂ., ಒಬಿಸಿ ಹಾಗೂ ಪ್ರವರ್ಗ 1ಕ್ಕೆ 13000, ಸಾಮಾನ್ಯ ವರ್ಗಕ್ಕೆ 18000 ಮತ್ತು ಪೇಮೆಂಟ್ ಶುಲ್ಕ18000 ಇತ್ತು. ಆದರೆ, ಈ ವರ್ಷ ಏಕಾಏಕಿ ವಿಶ್ವವಿದ್ಯಾಲಯವು ಎಸ್ಸಿ, ಎಸ್ಟಿ, ಒಬಿಸಿ ಪ್ರವರ್ಗ ಒಂದಕ್ಕೆ 19050 ರೂ. ಮತ್ತು ಪೇಮೆಂಟ್ ಶುಲ್ಕ ಎಸ್ಸಿ, ಎಸ್ಟಿಗೆ 39930, ಸಾಮಾನ್ಯ ವರ್ಗಕ್ಕೆ 58980 ರೂ. ಏರಿಕೆ ಮಾಡಿ ಕಳೆದ ಬಾರಿಗಿಂತ ಮೂರರಷ್ಟು ಏರಿಕೆ ಮಾಡಿದ್ದು ಸರ್ಕಾರ ಮತ್ತು ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಆಸೆಗೆ ಕೊಳ್ಳಿ ಹಿಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕೊರೋನ ಸಂಕಷ್ಟದ ಆರ್ಥಿಕ ಬಿಕ್ಕಟ್ಟಿನಲ್ಲಿ ಇರುವ ಸಂದರ್ಭದಲ್ಲಿಯೇ ರೈತರ ಮಕ್ಕಳು ಇಷ್ಟು ಹಣ ಕಟ್ಟಲು ತುಂಬಾ ಕಷ್ಟವಾಗುತ್ತದೆ. ಕೂಡಲೇ ಸರ್ಕಾರ ಮತ್ತು ವಿಶ್ವವಿದ್ಯಾಲಯ ಆಡಳಿತ ಮಂಡಳಿಯು ಮಧ್ಯಪ್ರವೇಶ ಮಾಡಿ ಶುಲ್ಕವನ್ನು ಕಡಿಮೆ ಮಾಡಬೇಕು. ವಿಶ್ವವಿದ್ಯಾಲಯವು ಕಡಿಮೆ ಮಾಡದೇ ಹೋದರೆ ಎಸ್‌ಎಫ್‌ಐ ಸಂಘಟನೆ ವತಿಯಿಂದ ವಿಶ್ವವಿದ್ಯಾಲಯದ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಉಪಾಧ್ಯಕ್ಷೆ ಅಂಕಿತ, ಮುಖಂಡರಾದ ರಾಜೇಶ್, ಚೈತ್ರ, ಭರತ್, ಅನುಷಾ, ಸೇರಿದಂತೆ ವಿದ್ಯಾರ್ಥಿಗಳು ಇದ್ದರು.