ಹೈದರಾಬಾದ್: ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಆರಂಭಿಕ ಯುವ ಬ್ಯಾಟ್ಸ್ಮನ್ ಶುಭಮನ್ ಗಿಲ್ ಚೊಚ್ಚಲ ದ್ವಿಶತಕ ಸಿಡಿಸುವ ಮೂಲಕ ಎದುರಾಳಿಗಳಿಗೆ ವಿಶ್ವಕಪ್ ಗೆ ನಾನು ತಯಾರಾಗಿದ್ದೇನೆ ಎಂಬ ಸೂಚನೆ ನೀಡಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನಾಯಕ ರೋಹಿತ್ ಶರ್ಮಾ ಮೊದಲ ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿ ಭದ್ರ ಬುನಾದಿ ಹಾಕಿದರು, ರೋಹಿತ್ ಶರ್ಮಾ 34 ರನ್ (38) ಎಸೆತಗಳಲ್ಲಿ ಗಳಿಸಿ ಬೌಲರ್ ಟಿಕ್ಕರ್ ಗೆ ವಿಕೆಟ್ ಒಪ್ಪಿಸಿದರು, ಶ್ರೀಲಂಕಾ ವಿರುದ್ಧ ಮಿಂಚಿದ್ದ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಹಾಗೂ ಈ ಪಂದ್ಯದಲ್ಲಿ ಅವಕಾಶ ಪಡೆದಿದ್ದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ಬೇಗನೇ ಔಟಾದರು.
ಆರಂಭಿಕ ಆಟಗಾರನಾಗಿ ಕಳೆದ ಸರಣಿಯಲ್ಲಿ ಮಿಂಚಿದ್ದ ಶುಭ್ಮಮನ್ ಗಿಲ್ ಹೈದರಾಬಾದ್ ಅಂಗಳದಲ್ಲಿ ಎದುರಾಳಿ ಬೌಲರ್ಗಳನ್ನು ಇನ್ನಿಲ್ಲದಂತೆ ಕಾಡಿದರು, 149 ಎಸೆತಗಳಲ್ಲಿ 19 ಬೌಂಡರಿ ಹಾಗೂ 9 ಸಿಕ್ಸರ್ ಸಿಡಿಸುವ ಮೂಲಕ 208 ರನ್ ಗಳಿಸಿ ವೈಯಕ್ತಿಕ ದಾಖಲೆ ಉತ್ತಮ ಪಡಿಸಿಕೊಳ್ಳುವ ಜೊತೆಗೆ ನ್ಯೂಜಿಲೆಂಡ್ ವಿರುದ್ಧ ಅತ್ಯದಿಕ ರನ್ ಸಿಡಿಸಿದ್ದ ಸಚಿನ್ ತೆಂಡೂಲ್ಕರ್ (186) ದಾಖಲೆ ಸರಿಗಟ್ಟಿದರು.
ಸೂರ್ಯಕುಮಾರ್ ಯಾದವ್ (31) ಹಾಗೂ ಉಪನಾಯಕ ಹಾರ್ದಿಕ್ ಪಾಂಡ್ಯ (28) ರನ್ ಗಳಿಸಿ ಔಟಾದರು, ಕೊನೆಯವರೆಗೂ ರನ್ ಗಳಿಸಿದ ಶುಭಮನ್ ಗಿಲ್ ತಂಡದ ಮೊತ್ತವನ್ನು 340 ರ ಗಡಿ ದಾಟಿಸಿ ವಿಕೆಟ್ ಒಪ್ಪಿಸಿದರು, ನ್ಯೂಜಿಲೆಂಡ್ ಪರವಾಗಿ ಶಿಪ್ಲೆ ಹಾಗೂ ಮಿಚೆಲ್ ತಲಾ 2 ವಿಕೆಟ್ ಪಡೆದರೆ ಫರ್ಗುಸನ್, ಸ್ಯಾಂಟ್ನರ್ ಹಾಗೂ ಟಿಕ್ಕರ್ ತಲಾ ಒಂದು ವಿಕೆಟ್ ಪಡೆದುಕೊಂಡರು.
350 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿದ ಪ್ರವಾಸಿ ನ್ಯೂಜಿಲೆಂಡ್ ತಂಡಕ್ಕೆ ಬೌಲರ್ ಸಿರಾಜ್ ಪ್ರಾರಂಭದಲ್ಲಿಯೇ ಆಘಾತ ನೀಡುವ ಮೂಲಕ ಉತ್ತಮ ಫಾರ್ಮ್ ನಲ್ಲಿರುವ ಡೆವಿಡ್ ಕಾನ್ವೆ ಅವರ ವಿಕೆಟ್ ಪಡೆದರು, ಮತ್ತೊಬ್ಬ ಆರಂಭಿಕ ಬ್ಯಾಟ್ಸ್ಮನ್ ಫಿನ್ ಅಲೆನ್ (40) ರನ್ ಗಳಿಸಿ ಭರವಸೆ ಮೂಡಿಸಿದ್ದರು ಆದರೆ ಶಾದು೯ಲ್ ಠಾಕೂರ್ ಅವರ ವಿಕೆಟ್ ಪಡೆಯುವ ಮೂಲಕ ಆಘಾತ ನೀಡಿದರು.
ನಂತರ ಬಂದ ನಿಕೊಲಾಸ್ ಹಾಗೂ ಮಿಚೆಲ್ ಅವರನ್ನು ಕುಲದೀಪ್ ಯಾದವ್ ಖೆಡ್ಡಾಕ್ಕೆ ಕೆಡವಿದರು, ಏಳನೇ ವಿಕೆಟ್ ಗೆ ಕ್ರೀಸ್ ಗೆ ಆಗಮಿಸಿದ ಮಿಚೆಲ್ ಬ್ರೆಸ್ವೆಲ್ 12 ಬೌಂಡರಿ ಹಾಗೂ 10 ಸಿಕ್ಸರ್ ಸಹಿತ ಕೇವಲ 78 ಬಾಲ್ ಗೆ (140) ರನ್ಗಳ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
ಒಂದು ಹಂತದಲ್ಲಿ ವಿಕೆಟ್ ಕಳೆದುಕೊಂಡರೂ ಸಹ ವಿಚಲಿತನಾಗದೇ ಏಕಾಂಗಿಯಾಗಿ ಹೋರಾಟ ನಡೆಸಿದ ಬ್ರೆಸ್ವೆಲ್ ಎಲ್ಲರ ಮೆಚ್ಚುಗೆಗೆ ಪಾತ್ರರಾದರು, ಕೊನೆಯ 5 ಎಸೆತಗಳಲ್ಲಿ 13 ರನ್ ಬೇಕಿದ್ದಾಗ ಲಾರ್ಡ್ ಶಾದು೯ಲ್ ಠಾಕೂರ್ ಬೀಸಿದ ಎಲ್ ಬಿಗೆ ಬಲಿಯಾದರು.
337 ರನ್ ಗಳಿಸಿ ಆಲೌಟ್ ಆದ ಬ್ಲಾಕ್ ಕ್ಯಾಪ್ ಖ್ಯಾತಿಯ ನ್ಯೂಜಿಲೆಂಡ್ ಉತ್ತಮ ಹೋರಾಟ ನೀಡಿ ಕೊನೆಯಲ್ಲಿ ಪಂದ್ಯ ಕೈ ಚೆಲ್ಲಿತು, ಭಾರತದ ಪರವಾಗಿ ಮೊಹಮ್ಮದ್ ಸಿರಾಜ್ ನಾಲ್ಕು ವಿಕೆಟ್ ಕಬಳಿಸಿದರೆ, ಶಾದು೯ಲ್ ಠಾಕೂರ್ ಹಾಗೂ ಸ್ಪಿನ್ನರ್ ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರು, ಅನುಭವಿ ಬೌಲರ್ ಶಮಿ ಹಾಗೂ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ದುಬಾರಿಯಾದರು. ದ್ವಿಶತಕ ದಾಖಲಿಸಿದ ಆರಂಭಿಕ ಬ್ಯಾಟ್ಸ್ಮನ್ ಶುಭಮನ್ ಗಿಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.