ಗಂಟಿಗಾನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಸಿ.ಕೆ.ದೇವರಾಜ್ ಅವಿರೋಧವಾಗಿ ಆಯ್ಕೆ

ತಾಲೂಕಿನ ಗಂಟಿಗಾನಹಳ್ಳಿ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಸಿ.ಕೆ.ದೇವರಾಜ್ ಹಾಗೂ ಉಪಾಧ್ಯಕ್ಷರಾಗಿ ಮುನಿಆಂಜಿನಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

14 ತಿಂಗಳ ಅವಧಿಗೆ ಸಂಬಂಧಿಸಿದಂತೆ ಗಂಟಿಗಾನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ  ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯನ್ನು ಇಂದು ಹಮ್ಮಿಕೊಳ್ಳಲಾಗಿತ್ತು, ಅಧ್ಯಕ್ಷ ಸ್ಥಾನಕ್ಕೆ ಸಿ.ಕೆ.ದೇವರಾಜ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮುನಿಆಂಜಿನಪ್ಪ ನಾಮಪತ್ರವನ್ನ ಸಲ್ಲಿಸಿದ್ದರು. ಆದರೆ ಇದಕ್ಕೆ ಬೇರೆ ಯಾರೂ ನಾಮಪತ್ರಗಳನ್ನ ಸಲ್ಲಿಸದ ಹಿನ್ನೆಲೆಯಲ್ಲಿ ಎಲ್ಲಾ ಸದಸ್ಯರ ಒಮ್ಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿಡಿಒ ಮಾಧವರೆಡ್ಡಿ ತಿಳಿಸಿದ್ದಾರೆ.

ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ನಿರ್ದೇಶಕರು, ಗಣ್ಯರು ಸನ್ಮಾನಿಸಿ ಸಿಹಿಹಂಚಿ ಸಂಭ್ರಮಿಸಿ ಗೌರವಿಸಿದರು.

ಗಂಟಿಗಾನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷ ಸಿ.ಕೆ.ದೇವರಾಜ್ ಮಾತನಾಡಿ, ಸಂಘದ ಎಲ್ಲಾ ನಿರ್ದೇಶಕರು ಒಮ್ಮತದಿಂದ ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ, ಗಂಟಿಗಾನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘವು ತಾಲೂಕಿನಲ್ಲೇ ಉನ್ನತ ಸ್ಥಾನಮಾನದಲ್ಲಿದೆ. ಈಗಾಗಲೇ 4 ಕೋಟಿ 8ಲಕ್ಷದ 50 ಸಾವಿರದವರೆಗೆ ಬೆಳೆ ಸಾಲವನ್ನ ರೈತರಿಗೆ ನೀಡಲಾಗಿದೆ. ಈ ಸಾಲವನ್ನ ಹೆಚ್ಚು ಮಾಡಲಾಗುವುದು, ಸಂಘದಡಿಯಲ್ಲಿ ಬರುವ ಎಲ್ಲಾ ಸೌಲಭ್ಯಗಳನ್ನು ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕಾರ್ಯ ಮಾಡಲಾಗುವುದು ಎಂದರು.

ನಂತರ ಕರ್ನಾಟಕ ರಾಜ್ಯ ತೆಂಗು ನಾರಿನ ಸಹಕಾರ ಮಹಾಮಂಡಳಿ ಅಧ್ಯಕ್ಷ ಎಸ್.ಎಲ್.ವೆಂಕಟೇಶ್ ಬಾಬು ಮಾತನಾಡಿ, ಮೊದಲಿನಿಂದಲೂ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿಲ್ಲ, ಎಲ್ಲರನ್ನೂ ಅವಿರೋಧವಾಗಿಯೇ ಆಯ್ಕೆ ಮಾಡಲಾಗುತ್ತಿದೆ. ಸಂಘದ ವತಿಯಿಂದ ರೈತರಿಗೆ ಬೇಕಾಗುವ ರಸಗೊಬ್ಬರಗಳು, ಬಿತ್ತನೆ ಬೀಜಗಳು ಸೇರಿದಂತೆ ಇತರೆ ಸವಲತ್ತುಗಳನ್ನು ಕಾಲಕಾಲಕ್ಕೆ ನೀಡಲಾಗುತ್ತಿದೆ ಎಂದರು.

ಈ ವೇಳೆ ಜಿ.ಪಂ ಮಾಜಿ ಸದಸ್ಯ ಎಚ್.ಅಪ್ಪಯ್ಯಣ್ಣ, ಸಂಘದ ನಿರ್ದೇಶಕರು, ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *