2023-24 ನೇ ಸಾಲಿನಲ್ಲಿ ಎಸ್.ಸಿ.ಪಿ,ಟಿ.ಎಸ್.ಪಿ ಯೋಜನೆಯಡಿ ಮೀಸಲಾಗಿರುವ ಅನುದಾನವನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣ ಪ್ರಮಾಣದಲ್ಲಿ ವ್ಯಯಿಸುವ ಮೂಲಕ ಭೌತಿಕವಾಗಿ, ಆರ್ಥಿಕವಾಗಿ ಶೇಕಡ 100ರಷ್ಟು ಪ್ರಗತಿ ಸಾಧಿಸಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ಇಂದು ನಡೆದ ಎಸ್.ಸಿ.ಪಿ-ಟಿ.ಎಸ್.ಪಿ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ವರ್ಷ ಬರ ಪರಿಸ್ಥಿತಿ ಎದುರಿಸುತ್ತಿದ್ದು, ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಎಸ್.ಸಿ.ಪಿ-ಟಿ.ಎಸ್.ಪಿ ಯೋಜನೆಯಡಿ ವಿವಿಧ ಇಲಾಖೆಗಳಿಗೆ ಈಗಾಗಲೇ ಅನುದಾನ ಬಿಡುಗಡೆ ಆಗಿದ್ದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮಾತ್ರ ಅನುದಾನವನ್ನು ಬಳಸಬೇಕು. ಶಾಲಾ ಶಿಕ್ಷಣ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳು ಈಗಾಗಲೇ ಶೇಕಡ 100% ಪ್ರಗತಿ ಸಾಧಿಸಿದ್ದು, ಕೃಷಿ, ರೇಷ್ಮೆ, ತೋಟಗಾರಿಕೆ, ಸಮಾಜ ಕಲ್ಯಾಣ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೀನುಗಾರಿಕೆ ಇಲಾಖೆ ಸೇರಿದಂತೆ ನಿಗಮಗಳಲ್ಲಿರುವ ಎಸ್.ಸಿ.ಪಿ-ಟಿ.ಎಸ್.ಪಿ ಬಾಕಿ ಇರುವ ಅನುದಾನವು ವ್ಯಯಮಾಡಲಾಗುತ್ತಿದ್ದು ನಿಗದಿತ ಕಾಲಮಿತಿಯೊಳಗೆ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ವ್ಯಯ ಮಾಡಿ ಪ್ರಗತಿ ವರದಿ ಸಲ್ಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಟಿ.ಎಲ್.ಎಸ್ ಪ್ರೇಮ, ಜಿಲ್ಲಾಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.